ಉಪ್ಪಿನಂಗಡಿ: ಪೌರತ್ವ ತಿದ್ದುಪಡಿ ಕಾಯ್ದೆ ಮಾಹಿತಿ ಕಾರ್ಯಾಗಾರ

ಉಪ್ಪಿನಂಗಡಿ : ನಾಗರಿಕ ಹಿತರಕ್ಷಣಾ ವೇದಿಕೆ ಉಪ್ಪಿನಂಗಡಿ ಇದರ ಆಶ್ರಯದಲ್ಲಿ 'ಪೌರತ್ವ ತಿದ್ದುಪಡಿ ಕಾಯ್ದೆ (ಎನ್‍ಪಿಆರ್., ಎನ್‍ಆರ್‍ಸಿ., ಸಿಎಎ) ವಿರುದ್ಧದ ಸರಣಿ ಪ್ರತಿಭಟನೆಗಳ ಬಳಿಕ ಮುಂದೇನು ?' ಎನ್ನುವ ಬಗ್ಗೆ ಮಾಹಿತಿ ಕಾರ್ಯಾಗಾರ ಸೋಮವಾರ ಉಪ್ಪಿನಂಗಡಿ ಶಾಂತಿ ಸೆಂಟರ್ ಸಭಾಂಗಣದಲ್ಲಿ ಜರಗಿತು.
ಕಾರ್ಯಾಗಾರದಲ್ಲಿ ಮಾನವ ಹಕ್ಕುಗಳ ಹೋರಾಟಗಾರ, ಅಂಕಣಕಾರ ಶಿವಸುಂದರ್ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ಬಿಜೆಪಿಯವರು ದಲಿತರು, ಮುಸ್ಲಿಮರು, ಹಿಂದುಳಿದ ವರ್ಗದವರನ್ನು ಹೊರ ಹಾಕಿ ಮನುಸ್ಮೃತಿ ಭಾರತ ಮಾಡುವ ಯತ್ನದಲ್ಲಿ ವ್ಯವಸ್ಥೆಗಳನ್ನು ಮಾಡುತ್ತಾ ಇದ್ದಾರೆ. ಈ ಕಾಯ್ದೆಗಳ ಬಗ್ಗೆ ಸರಕಾರಕ್ಕಾಗಲೀ, ಅಧಿಕಾರಿಗಳಿಗೂ ಸ್ಪಷ್ಟ ಮಾಹಿತಿ ಇಲ್ಲ. ಬರೇ ಸುಳ್ಳುಗಳನ್ನು ಹೇಳಿಕೊಂಡು ಮುಸ್ಲಿಮರಿಗೆ ಎದುರಿನಿಂದಲೂ, ಹಿಂದೂಗಳಿಗೆ ಹಿಂದಿನಿಂದಲೂ ಚೂರಿ ಹಾಕುವ ನಿಟ್ಟಿನಲ್ಲಿ ಇದು ಸಾಗುತ್ತಿದೆ ಎಂದರು.
ವಿ ಪೀಪಲ್ ಆಫ್ ಇಂಡಿಯಾ ಇದರ ದ.ಕ. ಜಿಲ್ಲಾ ಪ್ರತಿನಿಧಿ ಉಮರ್ ಯು.ಎಚ್. ಮಾತನಾಡಿ, ನಾವುಗಳು ಯಾವತ್ತೂ ಸಿಎಎ ಬೇಡ ಎಂದು ಹೇಳಿಲ್ಲ. ಅದನ್ನು ವಿಸ್ತರಿಸಿ ಎಂದು ಹೇಳುತ್ತಿದ್ದೇವೆ. ಆದರೆ ಬಿಜೆಪಿಯವರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ, ಇದೀಗ ಎನ್‍ಪಿಆರ್., ಎನ್‍ಆರ್‍ಸಿ ನಿಂದ ಆಗುವ ಸಮಸ್ಯೆಗಳ ಬಗ್ಗೆ ಕ್ರೈಸ್ತರಿಗೆ ಮನವರಿಕೆ ಆಗಿದೆ. ಶೇಕಡಾ 10ರಷ್ಟು ಹಿಂದೂ ಗಳಿಗೂ ಮನವರಿಕೆ ಆಗಿದ್ದು, ಮುಂದಿನ ದಿನಗಳಲ್ಲಿ ಎಲ್ಲರೂ ಒಂದೇ ವೇದಿಕೆ ಅಡಿಯಲ್ಲಿ ಸೇರಿ ಪ್ರತಿಭಟಿಸಬೇಕಾಗುತ್ತದೆ. ಈ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ ಎಂದರು.
ಉಪ್ಪಿನಂಗಡಿ ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಹಾಜಿ ಮುಸ್ತಫಾ ಕೆಂಪಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪ್ಪಿನಂಗಡಿ ನಾಗರಿಕ ಹಿತರಕ್ಷಣಾ ವೇದಿಕೆಯ ಝಕರಿಯಾ ಕೊಡಿಪ್ಪಾಡಿ ಸ್ವಾಗತಿಸಿದರು. ಜಲೀಲ್ ಮುಕ್ರಿ ವಂದಿಸಿದರು.







