ಬಿಸಿಲಿನ ತಾಪಕ್ಕೆ ನಲುಗಿದ್ದ ಮೈಸೂರಿಗೆ ತಂಪೆರೆದ ಮಳೆರಾಯ

ಸಾಂದರ್ಭಿಕ ಚಿತ್ರ
ಮೈಸೂರು,ಮಾ.2: ಬಿಸಿಲಿನ ತಾಪಕ್ಕೆ ಬೆಂದು ಹೋಗಿದ್ದ ಜನರಿಗೆ ಮಳೆರಾಯ ಕೃಪೆ ತೋರಿದ್ದು, ಇಂದು ಮಧ್ಯಾಹ್ನ ವರುಣ ಧರೆಗಿಳಿದು ತಂಪೆರೆದಿದ್ದಾನೆ.
ಮೈಸೂರು ನಗರದಲ್ಲಿ ರವಿವಾರ ರಾತ್ರಿ ಮಳೆ ಸುರಿದ್ದು, ಸೋಮವಾರವೂ ಕೂಡ ಮಳೆ ಬಂದು ಬಿಸಿಲಿನ ಬೇಗೆ ತಪ್ಪಿದಂತಾಗಿದೆ.
ಇಂದು ಮಧ್ಯಾಹ್ನ 1.15 ರ ಸುಮಾರಿಗೆ ದಟ್ಟವಾದ ಮೋಡ ಕಾಣಿಸಿಕೊಂಡು ಮಳೆ ಸುರಿದಿದೆ. ನಿನ್ನೆ ರಾತ್ರಿ ಸುಮಾರು 2ಗಂಟೆಯಿಂದಲೇ ಆರಂಭವಾದ ಮಳೆ ಬೆಳಗಿನ ಜಾವ 5 ಗಂಟೆಯವರೆಗೂ ಸುರಿದಿದೆ. ಮಳೆ ಸುರಿದ ಕಾರಣ ನಗರದ ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಎಸಿ, ಫ್ಯಾನ್ ಕಾರ್ಯನಿರ್ವಹಿಸದ ಕೆಲವು ಮನೆಗಳಲ್ಲಿ ಮಳೆಯ ಆಗಮನ ತಂಪೆರೆದಿದ್ದು, ತಂಪು ವಾತಾವರಣದಲ್ಲಿಯೇ ಜನರು ನಿದ್ರೆ ಮಾಡುವಂತೆ ಮಾಡಿತ್ತು.
ಮೈಸೂರು ತಾಲೂಕಿನಲ್ಲಿಯೂ ಮಳೆ ಸುರಿದಿದ್ದು ರೈತರ ಮೊಗದಲ್ಲಿ ಸಂತಸ ಮೂಡಿದೆ. ಕಳೆದ ಬಾರಿ ಉತ್ತಮ ಮಳೆಯಾಗಿದ್ದ ಕಾರಣ ಕೆರೆ ಕಟ್ಟೆಗಳಲ್ಲಿ ನೀರು ತುಂಬಿಕೊಂಡಿತ್ತು. ಹೀಗಾಗಿ ಜಾನುವಾರುಗಳಿಗೆ ಕುಡುಯುವ ನೀರಿನ ಸಮಸ್ಯೆ ಎದುರಾಗಿರಲಿಲ್ಲ. ತಾಲೂಕಿನ ಹಳ್ಳೊಗಾಡು ಪ್ರದೇಶಗಳಲ್ಲಿ ಕಳೆದೆರಡು ದಿನಗಳಿಂದ ಮಳೆ ಚೆನ್ನಾಗಿಯೇ ಸುರಿದಿದ್ದು ಕೆರೆ ಕಟ್ಟೆಗಳಿಗೆ ಮತ್ತಷ್ಟು ನೀರು ಹರಿದು ಬಂದಿದ್ದು ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗದು ಎಂದು ರೈತರು ಸಂತಸ ವ್ಯಕ್ತಪಡಿಸಿದ್ದಾರೆ.







