ಪರಿಸರ ಮಾಲಿನ್ಯ: ಎರಡು ಕಾರ್ಖಾನೆಗಳಿಗೆ ಬೀಗ ಜಡಿದ ಮಾಲಿನ್ಯ ನಿಯಂತ್ರಣ ಮಂಡಳಿ
ಬಳ್ಳಾರಿ, ಮಾ.2: ಭಾರೀ ಪ್ರಮಾಣದಲ್ಲಿ ಹೊರಸೂಸುವ ಹೊಗೆ, ಧೂಳಿನಿಂದಾಗಿ ಸುತ್ತಮುತ್ತಲಿನ ಪರಿಸರ ಮಾಲಿನ್ಯ ಹಾಳು ಮಾಡುತ್ತಿದ್ದ ಜಿಲ್ಲೆಯ ಸಂಡೂರು ತಾಲೂಕಿನ ಸುಲ್ತಾನಪುರ ಬಳಿಯ ಎರಡು ಸ್ಪಾಂಜ್ ಐರನ್ ಫ್ಯಾಕ್ಟರಿಗಳಿಗೆ ಬೀಗ ಹಾಕಲಾಗಿದೆ.
ಸುಲ್ತಾನಪುರ ಗ್ರಾಮದ ಯುವಕರೊಬ್ಬರು ನೀಡಿದ್ದ ದೂರಿನ ಮೇರೆಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಆದೇಶದಂತೆ ಈ ಕ್ರಮ ಜರುಗಿಸಲಾಗಿದೆ. ಗ್ರಾಮದ ಹೊರವಲಯದ ಪದ್ಮಾವತಿ ಸ್ಪಾಂಜ್ ಐರನ್ ಮತ್ತು ಜೆಎಸ್ ಡಬ್ಲು ಪ್ರಾಜೆಕ್ಟ್ ಫ್ಯಾಕ್ಟರಿಗಳಿಗೆ ಸಂಡೂರು ತಹಶೀಲ್ದಾರ್ ಎಚ್.ಜೆ.ರಶ್ಮಿ ನೇತೃತ್ವದ ತಂಡ ರವಿವಾರ ರಾತ್ರಿ ಎರಡು ಫ್ಯಾಕ್ಟರಿಗಳಿಗೆ ಬೀಗ ಹಾಕಲಾಗಿದೆ.
ಕಳೆದ ಡಿಸೆಂಬರನಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಈ ಬಗ್ಗೆ ಪರೀಶೀಲನೆ ಮತ್ತು ಪರೀಕ್ಷೆ ನಡೆಸಿತ್ತು. ಈ ವೇಳೆ ಕಾರ್ಖಾನೆಗಳಿಂದ ಮಾಲಿನ್ಯ ಉಂಟಾಗುವುದು ಸಾಬೀತಾಗಿದೆ. ಹೀಗಾಗಿ, ಅದನ್ನು ಸರಿಪಡಿಸುವವರೆಗೆ ಮುಚ್ಚಲು ಫೆ .24 ರಂದು ಆದೇಶಿಸಲಾಗಿದೆ.
ಈ ಕಾರ್ಖಾನೆಗಳಿಗೆ ವಿದ್ಯುತ್ ಮತ್ತು ನೀರು ಸರಬರಾಜು ಸ್ಥಗಿತಗೊಳಿಸುವಂತೆ ಸಂಬಂಧಿಸಿದ ಸಂಸ್ಥೆಗಳಿಗೆ ಸೂಚಿಸಲಾಗಿದೆ. ರಾಜ್ಯ ಸರಕಾರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯ ಕ್ರಮ ನನಗೂ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನತೆಗೆ ಸಂತಸ ತಂದಿದೆ. ಭವಿಷ್ಯದಲ್ಲಿ ಸರಕಾರ ಈ ಮಾಲಿನ್ಯಕಾರಕ ಕಾರ್ಖಾನೆಗಳನ್ನು ತೆರೆಯಲು ಅವಕಾಶ ಕೊಡಬಾರದು ಎಂದು ದೂರು ನೀಡಿದ ಯುವಕ ಮನವಿ ಮಾಡಿದ್ದಾರೆ.







