ಪೆರಿಫೆರಲ್ ರಿಂಗ್ ರಸ್ತೆ ಯೋಜನೆಯ ಭೂ ಸ್ವಾಧೀನ: ಪರಿಹಾರ ನೀಡುವಂತೆ ಆಗ್ರಹಿಸಿ ಅಹೋರಾತ್ರಿ ಧರಣಿ
ಬೆಂಗಳೂರು, ಮಾ.2: ಪೆರಿಫೆರಲ್ ರಿಂಗ್ ರಸ್ತೆ ಯೋಜನೆಯ ಭೂ ಸ್ವಾಧೀನಕ್ಕೆ ಮಾರುಕಟ್ಟೆ ದರದಂತೆ ಪರಿಹಾರ ನೀಡುವಂತೆ ಆಗ್ರಹಿಸಿ ರೈತ ಮುಖಂಡರು ಸೋಮವಾರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮುಂಭಾಗ ಅಹೋರಾತ್ರಿ ಧರಣಿ ನಡೆಸಿದರು.
ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು, ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ಭರವಸೆ ಹಿನ್ನೆಲೆ ಅಹೋರಾತ್ರಿ ಧರಣಿಯನ್ನು ತಾತ್ಕಾಲಿಕವಾಗಿ ಮುಂದೂಡಿದ್ದ ರೈತರು ಬೇಡಿಕೆಗೆ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸದಿರುವುದರಿಂದ ರೈತರು ಮತ್ತೆ ಧರಣಿ ಮುಂದುವರಿಸಿದ್ದಾರೆ.
ತುಮಕೂರು ರಸ್ತೆಯಿಂದ ಹೊಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಪೆರಫೆರಲ್ ರಿಂಗ್ ರಸ್ತೆ ಅಭಿವೃದ್ಧಿ ಪಡಿಸಲು 2004ರಲ್ಲಿ ಭೂ ಸ್ವಾಧೀನ ಅಧಿಸೂಚನೆ ಹೊರಡಿಸಿದ್ದು, 16 ವರ್ಷ ಕಳೆದರೂ ಸ್ವಾಧೀನ ಪಡಿಸಿಕೊಂಡ ರೈತರ ಭೂಮಿಗೆ ಉತ್ತಮ ಬೆಲೆ ನಿಗದಿ ಮಾಡಿಲ್ಲ. ಈ ಜಮೀನನ್ನು ಮಾರಾಟ ಮಾಡುವಂತಿಲ್ಲ. ಉಳುಮೆಯೂ ಮಾಡುವಂತಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರೈತರು ಸಿಲುಕಿದ್ದು, ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಿ ರೈತರ ಪರಿಹಾರ ವಿಷಯ ಬಗೆಹರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ತುಮಕೂರು ರಸ್ತೆಯ ಮಾದನಾಯಕಹಳ್ಳಿಯಿಂದ ಹೊಸೂರು ರಸ್ತೆವರೆಗೆ 66 ಕಿ.ಮೀ ಉದ್ದದ ಪೆರಫೆರಲ್ ರಿಂಗ್ ರಸ್ತೆ ನಿರ್ಮಿಸಲು 1810 ಎಕರೆ ಭೂ ಸ್ವಾಧೀನಕ್ಕೆ ಸರ್ವೇ ಕಾರ್ಯ ಪೂರ್ಣಗೊಳಿಸಿದ್ದು, 16 ವರ್ಷವಾದರೂ ಕಾಮಗಾರಿ ಆರಂಭವಾಗಿಲ್ಲ. ಆದ್ದರಿಂದ ಯೋಜನೆ ರದ್ದು ಮಾಡಿ, ಭೂ ಸ್ವಾಧೀನ ಪ್ರಕ್ರಿಯೆ ಕೈ ಬಿಟ್ಟು ನಿರಪೇಕ್ಷಣಾ ಪತ್ರ (ಎನ್‌ಒಸಿ) ನೀಡಬೇಕೆಂದು ಒತ್ತಾಯಿಸಿದರು.







