ದ್ವೇಷ ಭಾಷಣ ಕುರಿತು ಪ್ರತಿಕ್ರಿಯಿಸಲು ಸರಕಾರಕ್ಕೆ 4 ವಾರ ಕಾಲಾವಕಾಶ ನೀಡಿದ್ದು 'ಅಸಮರ್ಥನೀಯ': ಸುಪ್ರೀಂ
ಶುಕ್ರವಾರ ವಿಚಾರಣೆ ನಡೆಸಲು ದಿಲ್ಲಿ ಹೈಕೋರ್ಟಿಗೆ ಸೂಚನೆ

ಹೊಸದಿಲ್ಲಿ: ದಿಲ್ಲಿಯಲ್ಲಿ ದ್ವೇಷ ಭಾಷಣ ಮಾಡಿದ ಕೆಲ ಬಿಜೆಪಿ ನಾಯಕರ ವಿರುದ್ಧ ಎಫ್‍ಐಆರ್ ದಾಖಲಿಸಲು ಪೊಲೀಸರಿಗೆ ಸೂಚಿಸಬೇಕೆಂದು ಕೋರಿ ಸಲ್ಲಿಸಲಾದ ಅಪೀಲಿನ ಮೇಲೆ ವಿಚಾರಣೆ ನಡೆಸಿ ಸರಕಾರಕ್ಕೆ ಈ ಕುರಿತು ಪ್ರತಿಕ್ರಿಯಿಸಲು ನಾಲ್ಕು ವಾರಗಳ ಕಾಲಾವಕಾಶ ನೀಡಿದ ದಿಲ್ಲಿ ಹೈಕೋರ್ಟಿನ ಫೆಬ್ರವರಿ 29 ಆದೇಶ 'ಅಸಮರ್ಥನೀಯ' ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ವಿಚಾರಣೆಯನ್ನು ನಾಲ್ಕು ವಾರಗಳ ಕಾಲ ಮುಂದೂಡುವುದು ಸಮರ್ಥನೀಯವಲ್ಲವೆಂದು ಹೇಳಿದ ಮುಖ್ಯ ನ್ಯಾಯಮೂರ್ತಿ ಎಸ್. ಎ. ಬೊಬ್ಡೆ ವಿಚಾರಣೆಯನ್ನು ಶುಕ್ರವಾರ ನಿಗದಿಪಡಿಸಿ ಆದಷ್ಟು ಬೇಗ ತೀರ್ಪು ನೀಡಬೇಕೆಂದು ಸೂಚಿಸಿದ್ದಾರೆ.
ದಿಲ್ಲಿ ಹೈಕೋರ್ಟ್ ವಿಚಾರಣೆ ವೇಳೆ ಸರಕಾರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಮ್ಮ ವಾದ ಮಂಡಿಸಿ ಎಫ್‍ಐಆರ್ ದಾಖಲಿಸಲು ಈಗ ಪರಿಸ್ಥಿತಿ ಅನುಕೂಲಕರವಾಗಿಲ್ಲ ಎಂದಿದ್ದರು. ಅಂತಹದೇ ಅಭಿಪ್ರಾಯವನ್ನು ಅವರು ಇಂದು ಕೂಡ ಸುಪ್ರೀಂ ಕೋರ್ಟಿನ ಮುಂದೆ ವ್ಯಕ್ತಪಡಿಸಿದರು.
Next Story





