ಭಾರತೀಯ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ಕನ್ನಡಿಗ ಸುನೀಲ್ ಜೋಶಿ ಆಯ್ಕೆ

ಹೊಸದಿಲ್ಲಿ, ಮಾ.4: ಭಾರತದ ಮಾಜಿ ಸ್ಪಿನ್ನರ್ ಸುನೀಲ್ ಜೋಶಿ ಅವರನ್ನು ರಾಷ್ಟ್ರೀಯ ಆಯ್ಕೆ ಸಮಿತಿಯ ನೂತನ ಅಧ್ಯಕ್ಷರನ್ನಾಗಿ ಬಿಸಿಸಿಐನ ಕ್ರಿಕೆಟ್ ಸಲಹಾ ಸಮಿತಿ(ಸಿಎಸಿ)ಬುಧವಾರ ನೇಮಕ ಮಾಡಿದೆ.
ಮದನ್‌ಲಾಲ್, ರುದ್ರಪ್ರತಾಪ್ ಸಿಂಗ್ ಹಾಗೂ ಸುಲಕ್ಷಣ ನಾಯಕ್ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿ(ಸಿಎಸಿ)ಬುಧವಾರ ಮುಂಬೈನಲ್ಲಿರುವ ಬಿಸಿಸಿಐ ಪ್ರಧಾನ ಕಚೇರಿಯಲ್ಲಿ ಸಭೆ ನಡೆಸಿತು. ಐವರು ಸದಸ್ಯರುಗಳಿರುವ ಅಖಿಲ ಭಾರತ ಹಿರಿಯರ ಆಯ್ಕೆ ಸಮಿತಿಗೆ(ಪುರುಷರ ವಿಭಾಗ)ಇಬ್ಬರು ಹೊಸ ಸದಸ್ಯರುಗಳನ್ನು ನೇಮಿಸಿತು. ಸೀನಿಯರ್ ಆಯ್ಕೆ ಸಮಿತಿಗೆ ಸುನೀಲ್ ಜೋಶಿ ಹಾಗೂ ಮಾಜಿ ವೇಗದ ಬೌಲರ್ ಹರ್ವಿಂದರ್ ಸಿಂಗ್ ಹೆಸರುಗಳನ್ನು ಸಿಎಸಿ ಶಿಫಾರಸು ಮಾಡಿದೆ. ಸುನೀಲ್ ಜೋಶಿ ಹಾಗೂ ಹರ್ವಿಂದರ್ ಹಾಲಿ ಆಯ್ಕೆ ಸಮಿತಿ ಸದಸ್ಯರಾಗಿರುವ ದೇವಾಂಗ್ ಗಾಂಧಿ(ಪೂರ್ವ ವಲಯ), ಸರನ್‌ದೀಪ್ ಸಿಂಗ್(ಉತ್ತರ ವಲಯ) ಹಾಗೂ ಜತಿನ್ ಪರಂಜಪೆ(ಪಶ್ಚಿಮ ವಲಯ)ಅವರನ್ನು ಸೇರಿಕೊಳ್ಳಲಿದ್ದಾರೆ.
ಹಿರಿಯ ಪುರುಷರ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಸುನೀಲ್ ಜೋಶಿ ಇರಬೇಕೆಂದು ಸಿಎಸಿ ಶಿಫಾರಸು ಮಾಡಿದೆ. ಒಂದು ವರ್ಷದ ಅವಧಿಯ ನಂತರ ಅಭ್ಯರ್ಥಿಗಳನ್ನು ಸಿಎಸಿ ಪರಿಶೀಲಿಸುತ್ತದೆ ಹಾಗೂ ಬಿಸಿಸಿಐಗೆ ಶಿಫಾರಸು ಮಾಡುತ್ತದೆ ಎಂದು ಮಾಧ್ಯಮ ಪ್ರಕಟನೆಯೊಂದು ತಿಳಿಸಿದೆ.
‘‘ಹಿರಿಯ ಪುರುಷರ ಆಯ್ಕೆ ಸಮಿತಿಯ ಅಧ್ಯಕ್ಷ ಹುದ್ದೆಗೆ ಸುನೀಲ್ ಜೋಶಿ ಹೆಸರನ್ನು ಸಮಿತಿಯು ಶಿಫಾರಸು ಮಾಡಿದೆ. ಒಂದು ವರ್ಷದ ಅವಧಿಯಲ್ಲಿ ಅಭ್ಯರ್ಥಿಗಳನ್ನು ಪರಿಶೀಲಿಸಲಿ ರುವ ಸಿಎಸಿ ಆ ನಂತರ ಬಿಸಿಸಿಐಗೆ ಶಿಫಾರಸು ಮಾಡಲಿದೆ’’ ಎಂದು ಬಿಸಿಸಿಐ ಕಾರ್ಯದರ್ಶಿ ಜಯ ಶಾ ಹೇಳಿದ್ದಾರೆ.
ಸುನೀಲ್ ಜೋಶಿ ದಕ್ಷಿಣ ವಲಯವನ್ನು ಪ್ರತಿನಿಧಿಸುತ್ತಿದ್ದ ಎಂಎಸ್‌ಕೆ ಪ್ರಸಾದ್‌ರಿಂದ ತೆರವಾದ ಸ್ಥಾನ ತುಂಬಲಿದ್ದಾರೆ. ಹರ್ವಿಂದರ್ ಸಿಂಗ್ ಕೇಂದ್ರ ವಲಯದಿಂದ ಆಯ್ಕೆಯಾಗಿದ್ದು, ಗಗನ್ ಖೋಡ ಬದಲಿಗೆ ಆಯ್ಕೆಯಾಗಿದ್ದಾರೆ. ಹೈದರಾಬಾದ್‌ನ ಪ್ರಸಾದ್ ಅವರು ನಾಲ್ಕು ವರ್ಷಗಳ ಅವಧಿ ಮುಗಿದ ಬಳಿಕವೂ ಒಂದು ವರ್ಷ ಕಾಲ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಮುಂದುವರಿದಿದ್ದರು. ‘‘ನಾವು ಜವಾಬ್ದಾರಿಯುತ ಹುದ್ದೆಗೆ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ. ನಾವು ಅವರನ್ನು(ಜೋಶಿ, ಹರ್ವಿಂದರ್)ಆಯ್ಕೆ ಮಾಡಿದ್ದೇವೆ. ಅವರ ಅಭಿಪ್ರಾಯ ಸ್ಪಷ್ಟವಾಗಿದೆ.ನಾವು ನೇರ ನಡೆನುಡಿ ವ್ಯಕ್ತಿತ್ವವನ್ನು ಇಷ್ಟಪಡುತ್ತೇವೆ. ಬಾಂಗ್ಲಾದೇಶದ ರಾಷ್ಟ್ರೀಯ ಕ್ರಿಕೆಟ್ ತಂಡದ ಭಾಗವಾಗಿದ್ದ ಜೋಶಿ ಓರ್ವ ಅನುಭವಿ’’ ಎಂದು ಸಿಎಸಿ ಸದಸ್ಯ ಮದನ್ ಲಾಲ್ ಹೇಳಿದ್ದಾರೆ. 40 ಆಕಾಂಕ್ಷಿಗಳ ಪೈಕಿ ಸಂದರ್ಶನಕ್ಕೆ ಐವರು ಅಭ್ಯರ್ಥಿಗಳ ಕಿರು ಪಟ್ಟಿಯನ್ನು ಸಿಎಸಿ ಸಿದ್ಧಪಡಿಸಿತ್ತು. ಜೋಶಿ, ಹರ್ವಿಂದರ್, ವೆಂಕಟೇಶ ಪ್ರಸಾದ್, ರಾಜೇಶ್ ಚೌಹಾಣ್ ಹಾಗೂ ಎಸ್‌ಎಸ್ ಶಿವರಾಮಕೃಷ್ಣನ್‌ರನ್ನು ಸಂದರ್ಶನ ನಡೆಸಿತ್ತು. 42ರ ಹರೆಯದ ಹರ್ವಿಂದರ್ ಭಾರತವನ್ನು 3 ಟೆಸ್ಟ್ ಹಾಗೂ 16 ಏಕದಿನ ಪಂದ್ಯಗಳಲ್ಲಿ 1998ರಿಂದ 2001ರ ತನಕ ಪ್ರತಿನಿಧಿಸಿದ್ದರು. ಕ್ರಮವಾಗಿ 4 ಹಾಗೂ 24 ವಿಕೆಟ್‌ಗಳನ್ನು ಪಡೆದಿದ್ದರು. ಹೊಸ ಆಯ್ಕೆಗಾರರು ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಗೆ ಟೀಮ್ ಇಂಡಿಯಾವನ್ನು ಆಯ್ಕೆ ಮಾಡಲಿದ್ದಾರೆ. ಭಾರತ ಮಾ.12ರಂದು ದ.ಆಫ್ರಿಕಾ ವಿರುದ್ಧ ಧರ್ಮಶಾಲಾದಲ್ಲಿ ಮೊದಲ ಪಂದ್ಯವನ್ನು ಆಡಲಿದೆ. ಎರಡು ಹಾಗೂ ಮೂರನೇ ಪಂದ್ಯ ಲಕ್ನೋ(ಮಾ.15) ಹಾಗೂ ಕೋಲ್ಕತಾ(ಮಾ.18)ದಲ್ಲಿ ನಡೆಯಲಿದೆ.
ಸುನೀಲ್ ಜೋಶಿ ಪರಿಚಯ
ಸುನೀಲ್ ಜೋಶಿ ಭಾರತದ ಮಾಜಿ ಬೌಲಿಂಗ್ ಆಲ್‌ರೌಂಡರ್ ಆಗಿದ್ದವರು. ಕರ್ನಾಟಕದ ಗದಗ್‌ನಲ್ಲಿ ಜೂ.6,1970ರಲ್ಲಿ ಜನಿಸಿದರು. ಎಡಗೈ ಸ್ಪಿನ್ನರ್ ಹಾಗೂ ಎಡಗೈ ಬ್ಯಾಟ್ಸ್ ಮನ್ ಆಗಿದ್ದರು. ಜೋಶಿ ಪ್ರತಿದಿನ ಗದಗದಿಂದ ಹುಬ್ಬಳ್ಳಿಗೆ ಪ್ರಾಕ್ಟೀಸ್ ನಡೆಸಲು ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಇವರು ಕರ್ನಾಟಕ ರಾಜ್ಯ ರಣಜಿ ತಂಡದಲ್ಲಿ ಆಡಿದ್ದರು. 1995-96ರ ಋತುವಿನಲ್ಲಿ 500 ರನ್ ಹಾಗೂ 50 ವಿಕೆಟ್‌ಗಳನ್ನು ಪಡೆದಿದ್ದರು. ಈ ಸಾಧನೆ ಮೂಲಕ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಒಟ್ಟು 615 ವಿಕೆಟ್ ಹಾಗೂ 5,129 ರನ್ ಗಳಿಸಿದ್ದರು.
1996ರಲ್ಲಿ ಬರ್ಮಿಂಗ್‌ಹ್ಯಾಮ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯ ಆಡಿದ್ದರು. 1996ರಲ್ಲಿ ಝಿಂಬಾಬ್ವೆ ವಿರುದ್ಧ ಏಕದಿನ ಕ್ರಿಕೆಟ್‌ಗೆ ಕಾಲಿಟ್ಟಿದ್ದರು. ಐಪಿಎಲ್‌ನಲ್ಲಿ ಆರ್‌ಸಿಬಿ, ಕೆಕೆಆರ್ ಪರ ಆಡಿದ್ದರು. ಭಾರತದ ಪರ 15 ಟೆಸ್ಟ್ ಪಂದ್ಯ ಆಡಿದ್ದ ಅವರು 352 ರನ್ ಹಾಗೂ 41 ವಿಕೆಟ್‌ಗಳನ್ನು ಪಡೆದಿದ್ದರು.
69 ಏಕದಿನ ಪಂದ್ಯಗಳಲ್ಲಿ 584 ರನ್ ಹಾಗೂ 69 ವಿಕೆಟ್‌ಗಳನ್ನು ಉರುಳಿಸಿದ್ದರು. 2012ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ನಿಂದ ನಿವೃತ್ತಿಯಾದರು. ನಿವೃತ್ತಿಯ ಬಳಿಕ ಹೈದರಾಬಾದ್ ಕ್ರಿಕೆಟ್ ತಂಡದ ಕೋಚ್‌ಆಗಿದ್ದರು. 2015ರಲ್ಲಿ ಒಮಾನ್ ರಾಷ್ಟ್ರೀಯ ಕ್ರಿಕೆಟ್ ತಂಡದ ಸ್ಪಿನ್ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. 2016ರಲ್ಲಿ ಅಸ್ಸಾಂ ರಣಜಿ ತಂಡಕ್ಕೆ ಕೋಚಿಂಗ್ ನೀಡಿದ್ದರು. 2017ರಲ್ಲಿ ಬಾಂಗ್ಲಾದೇಶದ ಸ್ಪಿನ್ ಬೌಲಿಂಗ್ ಸಲಹೆಗಾರರಾಗಿಯೂ ಕೆಲಸ ಮಾಡಿದ್ದರು.







