ರೆಸಾರ್ಟ್ ಮಾಲಕ ಅಪಹರಣ: ಆರೋಪಿಗಳ ಬಂಧನ

ಗುಂಡ್ಲುಪೇಟೆ, ಮಾ.4: ಮುಂಜಾನೆ ವಾಯುವಿಹಾರಕ್ಕೆ ತೆರಳಿದ್ದ ಉದ್ಯಮಿಯನ್ನು ಅಪಹರಿಸಿದ್ದ ಮೂವರು ಆರೋಪಿಗಳನ್ನು ಪಟ್ಟಣ ಠಾಣೆ ಪೊಲೀಸರು ಬಂಧಿಸಿದ್ದು, ಉದ್ಯಮಿಯನ್ನು ರಕ್ಷಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಕೇರಳ ಮೂಲದ ಹನೀಫ್, ನಿಷಾಹ್ ಹಾಗೂ ಅಬೂಬಕ್ಕರ್ ಎಂದು ಗುರುತಿಸಲಾಗಿದೆ. ಸಲೀಂ ಎಂಬಾತ ಪರಾರಿಯಾಗಿದ್ದಾನೆ.
ರೆಸಾರ್ಟ್ ಹಾಗೂ ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ಮಂಡಿ ನಡೆಸುತ್ತಿರುವ ಪಟ್ಟಣದ ನಿವಾಸಿ ಮಹದೇವನಾಯ್ಕ ಮಂಗಳವಾರ ಮುಂಜಾನೆ 6 ಗಂಟೆ ಸಮಯದಲ್ಲಿ ಪತ್ನಿಯೊಂದಿಗೆ ಡಿ.ದೇವರಾಜ ಅರಸು ಕ್ರೀಡಾಂಗಣಕ್ಕೆ ತೆರಳುತ್ತಿದ್ದಾಗ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಅವರನ್ನು ಅಪಹರಿಸಿದ್ದರು. ಕಳೆದ ವರ್ಷ ಕೇರಳ ಮೂಲದ ಬಷೀರ್ ಎಂಬಾತ ರೆಸಾರ್ಟ್ ಗುತ್ತಿಗೆಗೆ ಪಡೆದು ನಡೆಸುತ್ತಿದ್ದು ಆತನನ್ನು ಇತ್ತೀಚೆಗೆ ಬಲವಂತವಾಗಿ ಹೊರಹಾಕಲಾಗಿತ್ತು. ಈ ಹಿನ್ನೆಲೆಯಲ್ಲಿ ಬಷೀರ್ ಕಡೆಯವರು ಅಪಹರಿಸಿದ್ದಾರೆ ಎಂದು ಪತ್ನಿ ವೆಂಕಟಮ್ಮ ಪೆÇಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆ ಕಾರ್ಯದಲ್ಲಿ ತೊಡಗಿ, ಕೇರಳದ ತೋಟವೊಂದರಲ್ಲಿ ಇರುವ ಮಾಹಿತಿ ಅರಿತು ಉದ್ಯಮಿಯನ್ನು ರಕ್ಷಿಸಿ, ಆರೋಪಿಗಳನ್ನು ಬಂಧಿಸಿದರು. ಆರೋಪಿಗಳು ಉದ್ಯಮಿ ಮೇಲೆ ಹಲ್ಲೆ ನಡೆಸಿದ್ದಲ್ಲದೆ, 8 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ದುಷ್ಕರ್ಮಿಗಳಿಂದ ಹಲ್ಲೆಗೀಡಾಗಿ ಗಾಯಗೊಂಡಿದ್ದ ಮಹದೇವನಾಯ್ಕ ಅವರಿಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸಲಾಗಿದೆ.ಕಾರ್ಯಾಚರಣೆಯಲ್ಲಿ ಸಿಪಿಐ ಮಹದೇವಸ್ವಾಮಿ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.







