ಉಡುಪಿ: ಸಾಂಗವಾಗಿ ಮುಗಿದ ಮೊದಲ ದಿನದ ಪಿಯುಸಿ ಪರೀಕ್ಷೆ
ಮೂರು ವಿಷಯಗಳಲ್ಲಿ ಒಟ್ಟು 142 ಮಂದಿ ಗೈರು
ಉಡುಪಿ, ಮಾ.4: ಜಿಲ್ಲೆಯಾದ್ಯಂತ 27 ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಅಕ್ರಮ, ಅಹಿತಕರ ಘಟನೆಗಳಿಲ್ಲದೇ ಸಾಂಗವಾಗಿ ನಡೆದ ದ್ವಿತೀಯ ಪಿಯುಸಿಯ ಮೊದಲ ದಿನದ ಮೂರು ವಿಷಯಗಳ ಪರೀಕ್ಷೆಗಳಿಗೆ ಒಟ್ಟು 142 ಮಂದಿ ಗೈರುಹಾಜರಾಗಿದ್ದಾರೆ.
ಪರೀಕ್ಷೆಯ ಕುರಿತಂತೆ ಎಲ್ಲಾ ವಿದ್ಯಾರ್ಥಿಗಳಿಗೂ ಮೊದಲೇ ಸಮಗ್ರ ಮಾಹಿತಿ ಗಳನ್ನು ನೀಡಿದ್ದರಿಂದ ಇಂದು ವಿದ್ಯಾರ್ಥಿಗಳು ಯಾವುದೇ ಗೊಂದಲ, ಆತಂಕ ಗಳಿಲ್ಲದೇ ಮೊದಲ ದಿನದ ಪರೀಕ್ಷೆಗಳನ್ನು ಬರೆದಿದ್ದಾರೆ. ಪರೀಕ್ಷೆ ಅತ್ಯಂತ ಶಾಂತಿ ಯುತವಾಗಿ ನಡೆದಿದೆ ಎಂದು ಡಿಡಿಪಿಯು ಭಗವಂತ ಕಟ್ಟಿಮನಿ ತಿಳಿಸಿದ್ದಾರೆ.
ಇಂದಿನಿಂದ ಮಾ.23ರವರೆಗೆ ನಡೆಯುವ ದ್ವಿತೀಯ ಪಿಯುಸಿ ಪರೀಕ್ಷೆಯ ಮೊದಲ ದಿನ ಒಟ್ಟು ಮೂರು ಪರೀಕ್ಷೆಗಳು ನಡೆದವು. ಬೇಸಿಕ್ ಮ್ಯಾಥ್ಸ್‌ನಲ್ಲಿ ಜಿಲ್ಲೆಯಲ್ಲಿ 187 ಮಂದಿ ಹೆಸರು ನೊಂದಾಯಿಸಿಕೊಂಡಿದ್ದು, ಒಬ್ಬ ವಿದ್ಯಾರ್ಥಿ ಗೈರುಹಾಜರಾಗಿ 186 ಮಂದಿ ಪರೀಕ್ಷೆ ಬರೆದಿದ್ದಾರೆ.
ಇತಿಹಾಸ ವಿಷಯಕ್ಕೆ ನೊಂದಾಯಿತ 5223 ವಿದ್ಯಾರ್ಥಿಗಳಲ್ಲಿ 5100ಮಂದಿ ಹಾಜರಾಗಿ 123 ಮಂದಿ ಗೈರುಹಾಜರಾಗಿದ್ದಾರೆ. ಅದೇ ರೀತಿ ಭೌತಶಾಸ್ತ್ರ ಪರೀಕ್ಷೆಗೆ 4986 ಮಂದಿ ನೊಂದಾಯಿತರಾಗಿದ್ದು ಇವರಲ್ಲಿ 4968 ಮಂದಿ ಪರೀಕ್ಷೆ ಬರೆದು 18 ಮಂದಿ ಗೈರಾಗಿದ್ದಾರೆ. ಒಟ್ಟಾರೆಯಾಗಿ ಇಂದು ಜಿಲ್ಲೆಯಲ್ಲಿ 10,396 ಮಂದಿ ಪರೀಕ್ಷೆಗೆ ಹೆಸರು ನೊಂದಾಯಿಸಿಕೊಂಡಿದ್ದು, ಇವರಲ್ಲಿ 10,254 ಮಂದಿ ಪರೀಕ್ಷೆ ಬರೆದು 142 ಮಂದಿ ಗೈರುಹಾಜರಾಗಿದ್ದಾರೆ ಎಂದು ಡಿಡಿಪಿಯು ತಿಳಿಸಿದ್ದಾರೆ.







