ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮನವಿ ಪುಸ್ತಿಕೆಯಲ್ಲಿ ಆರೆಸ್ಸೆಸ್ ಶಿಫಾರಸ್ಸು ಪತ್ರ !
ಹೊಸ ವಿವಾದ ಸೃಷ್ಟಿ

ಬೆಂಗಳೂರು, ಮಾ.4: ವಿವಿಧ ಬೇಡಿಕೆಗಳನ್ನಿಟ್ಟುಕೊಂಡು ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಕೇಂದ್ರ ಸರಕಾರಕ್ಕೆ ಸಲ್ಲಿಸಬೇಕಿದ್ದ ಮನವಿ ಪುಸ್ತಿಕೆಯಲ್ಲಿ ಆರೆಸ್ಸೆಸ್ ಶಿಫಾರಸ್ಸು ಪತ್ರ ಕಂಡು ಬಂದಿದ್ದು, ಇದು ಹೊಸ ವಿವಾದಕ್ಕೆ ನಾಂದಿ ಹಾಡಿದೆ.
ದಿಲ್ಲಿಯಲ್ಲಿಂದು ಕೇಂದ್ರ ಸಚಿವ ಸದಾನಂದ ಗೌಡರ ಮನೆಯಲ್ಲಿ ಸಭೆ ಆಯೋಜಿಸಲಾಗಿತ್ತು. ಇಲ್ಲಿ ರಾಜ್ಯದ ಸಂಸದರು ಹಾಗೂ ಸಚಿವರ ಮುಖಾಂತರ ಸರಕಾರಕ್ಕೆ ಹಲವು ಬೇಡಿಕೆಗಳಿಗೆ ಸಂಬಂಧಿಸಿದಂತೆ ಮನವಿ ಸಲ್ಲಿಸಬೇಕಿತ್ತು. ಆದರೆ, ಆ ಮನವಿ ಪುಸ್ತಿಕೆಯಲ್ಲಿ ಆರೆಸ್ಸೆಸ್‌ನ ಶಿಫಾರಸ್ಸು ಪತ್ರ ಕಂಡುಬಂದಿದೆ.
ಸಭೆಯ ಸಂದರ್ಭದಲ್ಲಿ ಕಾಂಗ್ರೆಸ್ ಸಂಸದರು ಮನವಿ ಪತ್ರದ ಪುಸ್ತಿಕೆಯಲ್ಲಿ ಆರೆಸ್ಸೆಸ್ ಪತ್ರ ನೋಡಿ ಪ್ರಾಧಿಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸಭೆಯನ್ನು ಬಹಿಷ್ಕರಿಸಿದರು. ಈ ವೇಳೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್, ಆಡಳಿತಾರೂಢ ಸರಕಾರವನ್ನು ಮೆಚ್ಚಿಸಲು ಪ್ರಾಧಿಕಾರ ಹೀಗೆ ಮಾಡಿದೆ ಎಂದು ಆಪಾದಿಸಿದರು.
'ಕನ್ನಡದ ಪರ ಹೋರಾಟ ನಡೆಸಲು ರಾಜ್ಯದಲ್ಲಿ ಅನೇಕ ಸಂಘಟನೆಗಳಿವೆ. ಅವರ ಮನವಿಯನ್ನು ಪುಸ್ತಿಕೆಯಲ್ಲಿ ಅಡಕಗೊಳಿಸದೆ ಹಿಂದಿ ಮತ್ತು ಸಂಸ್ಕೃತ ಭಾಷೆಗಳ ಪರ ಇರುವ ಆರೆಸ್ಸೆಸ್ನ ಪತ್ರವನ್ನು ಮುದ್ರಿತ ಪುಸ್ತಿಕೆಯಲ್ಲಿ ಅಳವಡಿಸಿದ್ದು ಅಕ್ಷಮ್ಯ ಎಂದು ರಾಜ್ಯಸಭಾ ಸದಸ್ಯ ರಾಜೀವ್ ಗೌಡ ಅವರು ತಿಳಿಸಿದರು.
'ಸರಕಾರದ ಅಧೀನ ಸಂಸ್ಥೆಯಾದ ಪ್ರಾಧಿಕಾರವು ಕನ್ನಡದ ಅಭ್ಯುದಯ ಕೋರಿ ಕೇಂದ್ರಕ್ಕೆ ಏನೆಲ್ಲ ಮನವಿ ಕೊಡಬಹುದು. ಆದರೆ ಖಾಸಗಿ ಸಂಸ್ಥೆಯೊಂದರ ಮನವಿ ಪತ್ರವನ್ನು ಅಡಕಗೊಳಿಸಿದ್ದು ಸೂಕ್ತವಲ್ಲ' ಎಂದು ಎಲ್.ಹನುಮಂತಯ್ಯ ದೂರಿದರು.
ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಅವರ ನೇತೃತ್ವದ ನಿಯೋಗವು ಕನ್ನಡದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇಂದ್ರಕ್ಕೆ ಮನವಿ ಸಲ್ಲಿಸಲಿದ್ದು, ಸಚಿವರ ನಿವಾಸದಲ್ಲಿ ರಾಜ್ಯದ ಸರ್ವ ಪಕ್ಷಗಳ ಸಂಸದರ ಸಭೆ ಆಯೋಜಿಸಿತ್ತು. ಆರೆಸ್ಸೆಸ್ 2018ರಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾಡಿದ ನಿರ್ಣಯ ಇರುವ ವಿವರವನ್ನು ಪ್ರಾಧಿಕಾರ ಪುಸ್ತಿಕೆಯಲ್ಲಿ ಪ್ರಕಟಿಸಿದೆ.











