ಕುಮಾರ್ ನಾಯಕ ವರದಿ ಜಾರಿಗೆ ಒತ್ತಾಯಿಸಿ ಕಪ್ಪು ಪಟ್ಟಿ ಧರಿಸಿ ಉಪನ್ಯಾಸಕರ ಪ್ರತಿಭಟನೆ
ಬೆಂಗಳೂರು, ಮಾ.4: ಕುಮಾರ್ ನಾಯಕ ವರದಿ ಜಾರಿ ಹಾಗೂ ಉಪನಾಸ್ಯಕರ ವೇತನ ತಾರತಮ್ಯ ಹೋಗಲಾಡಿಸಬೇಕು ಎಂದು ಒತ್ತಾಯಿಸಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು ಬುಧವಾರದಿಂದ ಪ್ರಾರಂಭವಾಗಿರುವ 2019-20ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಕೇಂದ್ರಗಳಲ್ಲಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.
ನಗರಕ್ಕೆ ದ್ವಿತೀಯ ಪಿಯು ಪರೀಕ್ಷಾ ಮೇಲ್ವಿಚಾರಣೆಗೆ ಆಗಮಿಸಿರುವ ಉಪನ್ಯಾಸಕರು ಪಿಯುಸಿ ಪರೀಕ್ಷಾ ಕೇಂದ್ರಗಳಲ್ಲಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ವ್ಯಕ್ತಪಡಿಸಿದರು. ನಮ್ಮ ವೇತನದಲ್ಲಿನ ತಾರತಮ್ಯ, ಭಡ್ತಿ ಸೇರಿದಂತೆ ನಾನಾ ಬೇಡಿಕೆಗಳ ಕುರಿತು ಸರಕಾರಕ್ಕೆ ಕುಮಾರ ನಾಯಕ್ ವರದಿ ನೀಡಲಾಗಿತ್ತು. ಆದರೆ ವರದಿಯನ್ನು ಜಾರಿಗೆ ತರುವಲ್ಲಿ ಸರಕಾರ ವಿಳಂಬ ನೀತಿ ಅನುಸರಿಸುತ್ತಿದೆ. ಕೂಡಲೇ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ನಾವು ಈ ಹಿಂದೆ ನಾಲ್ಕು ಬಾರಿ ಪ್ರತಿಭಟನೆ ನಡೆಸಿದ್ದೆವು. ಆದರೆ ಸರಕಾರ ನಮ್ಮ ಮನವಿಗೆ ಸ್ಪಂದಿಸಿಲ್ಲ. ಶೀಘ್ರದಲ್ಲಿ ನಮ್ಮ ಬೇಡಿಕೆ ಈಡೇರಿಸದಿದ್ದರೆ ಪಿಯುಸಿ ಮೌಲ್ಯಮಾಪನ ಬಹಿಷ್ಕರಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.





