ತಮಿಳುನಾಡು: ಸಿಎಎ ವಿರೋಧಿ ಪ್ರತಿಭಟನೆಗೆ ದಾರುಲ್ ಇರ್ಶಾದ್ ವಿದ್ಯಾರ್ಥಿಗಳ ಸಾಥ್

ಬಂಟ್ವಾಳ, ಮಾ.4: ದೆಹಲಿಯ ಶಾಹಿನ್‍ಭಾಗ್ ಮಾದರಿಯಲ್ಲಿ ತಮಿಳುನಾಡಿನ ತಿರುಚಿನಾಪಳ್ಳಿಯಲ್ಲಿ ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಯನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ದಾರುಲ್ ಇರ್ಶಾದ್ ಮಾಣಿ ಇದರ ಆಧೀನ ಸಂಸ್ಥೆ ಮಿತ್ತೂರು ಕೆಜಿಎನ್ ದಅ್ ವಾ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ಇತರ ಪ್ರತಿಭಟನಕಾರರಿಗೆ ಸಾಥ್ ನೀಡಿದರು.
ತಮಿಳುನಾಡು ಪ್ರವಾಸಕ್ಕೆಂದು ತೆರಳಿರುವ ಸಂಸ್ಥೆಯ ಏಳು ಮಂದಿ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿ ಅಝಾದಿ ಘೋಷಣೆ ಕೂಗಿ ಬಳಿಕ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ವಿದ್ಯಾರ್ಥಿ ಸಲಾಂ ಸಾಲೆತ್ತೂರು, ದೇಶದ ಸಂವಿಧಾನ ಹಾಗೂ ಭಾರತೀಯತೆಯನ್ನು ಉಳಿಸುವ ನಿಟ್ಟಿನಲ್ಲಿ ತಮ್ಮ ಎಲ್ಲಾ ಕೆಲಸ ಕಾರ್ಯಗಳನ್ನು ಬದಿಗಿಟ್ಟು ದಿನದ 24 ಗಂಟೆಯೂ ಜನಸಾಮಾನ್ಯರು ನಡೆಸುತ್ತಿರುವ ಹೋರಾಟ ಐತಿಹಾಸಿಕವಾಗಿದೆ. ಸಿಎಎಯಿಂದ ಯಾರಿಗೂ ಯಾವುದೇ ತೊಂದರೆ ಇಲ್ಲ ಎಂದು ಕೆಳವರು ಹೇಳುತ್ತಿದ್ದಾರೆ. ಆದರೆ ಅದು ಸತ್ಯವಲ್ಲ. ಈ ಕಾಯ್ದೆ ಭಾರತೀಯರ ಪಾಳಿಗೆ ಕರಾಳ ಕಾಯ್ದೆಯಾಗಿದ್ದು, ಭಾರತೀಯತೆಯನ್ನು ನಾಶ ಮಾಡುವ ಷಡ್ಯಂತ್ರವನ್ನು ಹೊಂದಿದೆ ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಾದ ಅನ್ಸೀಫ್ ಮಂಚಿ, ಮುಂದೀರ್ ಬೊಳಂತ್ತೂರು, ಇಝುದ್ದೀನ್ ಕಣ್ಣೂರು, ಆಸಿಫ್ ಸಜಿಪ, ಮುಝಮ್ಮಿಲ್ ಸರಳಿಕಟ್ಟೆ, ತಂಶೀರ್ ಉಳ್ಳಾಲ್ ಉಪಸ್ಥಿತರಿದ್ದರು.







