ಕೊರೋನ ವೈರಸ್ ಭೀತಿ: ಕೊಡಗಿನ ಇಬ್ಬರು ಯುವಕರ ಮೇಲೆ ನಿಗಾ

ಡಾ. ಮೋಹನ್
ಮಡಿಕೇರಿ, ಮಾ.4: ಕೊಡಗು ಜಿಲ್ಲೆಯಲ್ಲಿ ಇದುವರೆಗೆ ಯಾರಲ್ಲೂ ಕೊರೋನ ವೈರಸ್ ಪತ್ತೆಯಾಗಿಲ್ಲ. ಆದರೆ ಇತ್ತೀಚೆಗೆ ಚೀನಾದಿಂದ ಬಂದಿರುವ ಇಬ್ಬರು ಯುವಕರ ಮೇಲೆ ನಿಗಾ ಇರಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮೋಹನ್ ಅವರು ತಿಳಿಸಿದ್ದಾರೆ.
ಈಲ್ಲೆಗೆ ಹೊರಗಿನಿಂದ ಬರುವವರ ಬಗ್ಗೆ ತೀವ್ರ ನಿಗಾವಹಿಸಲಾಗುತ್ತಿದೆ. ಅದರಂತೆ ಜಿಲ್ಲೆಯ ಗಡಿ ಭಾಗಗಳಾದ ಕುಟ್ಟ, ಮಾಕುಟ್ಟ ಹಾಗೆಯೇ ಕರಿಕೆ ವ್ಯಾಪ್ತಿಯಲ್ಲಿ ವಿದೇಶಗಳಿಂದ ಆಗಮಿಸಿದವರ ಮೇಲೆ ನಿಗಾ ವಹಿಸಲಾಗಿದೆ. ಜ್ವರ ಶೀತ, ಕೆಮ್ಮು ಇದ್ದರೆ ತಕ್ಷಣ ಆಸ್ಪತ್ರೆಗೆ ಹೋಗಿ ಪರೀಕ್ಷಿಸಿಕೊಳ್ಳುವಂತೆ ಮಾಹಿತಿ ನೀಡಲಾಗಿದೆ. ಚೀನಾದಿಂದ ಇಬ್ಬರು ವ್ಯಕ್ತಿಗಳು ವಾಪಾಸು ಬಂದಿದ್ದು, ಅವರ ಮೇಲೆ 28 ದಿನಗಳ ಕಾಲ ನಿಗಾ ಇರಿಸಿದ್ದೇವೆ. ಆದರೆ ಅವರಲ್ಲಿ ಯಾವುದೇ ವೈರಸ್ ಲಕ್ಷಣಗಳು ಕಂಡು ಬಂದಿಲ್ಲ ಎಂದು ಅವರು ಹೇಳಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಜಿಲ್ಲೆಯ ವಿವಿಧೆಡೆ ಭಿತ್ತಿ ಪತ್ರ ಹಂಚುವ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ. ಕೊಡಗು ಪ್ರವಾಸೋದ್ಯಮ ತಾಣವಾದ್ದರಿಂದ ಅಧಿಕ ಸಂಖ್ಯೆಯಲ್ಲಿ ವಿದೇಶಗಳಿಂದ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಹೀಗಾಗಿ ಕೊವೀಡ್-19 ವೈರಸ್ ಬಗ್ಗೆ ನಗರದ ಪ್ರಮುಖ ಪ್ರವಾಸಿ ತಾಣ ರಾಜಾಸೀಟ್ ಸೇರಿದಂತೆ ಜನ ನಿಬಿಡ ಪ್ರದೇಶಗಳಲ್ಲಿ ವೈರಸ್ ಲಕ್ಷಣಗಳು ಹಾಗೂ ಅದು ಹರಡುವ ವಿಧಾನ, ಸಾರ್ವಜನಿಕರು ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳು ಹಾಗೂ ಚಿಕಿತ್ಸೆ ಬಗ್ಗೆ ಪ್ರವಾಸಿಗರಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.
ಕೊರೋನ ವೈರಸ್ ಕಂಡು ಬಂದಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ 5 ಹಾಗೆಯೇ ತಾಲೂಕು ಆಸ್ಪತ್ರೆಗಳಲ್ಲಿ ತಲಾ ಎರಡೆರಡು ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ. ಚಿಕಿತ್ಸೆಗೆ ಅಗತ್ಯ ಮಾಸ್ಕ್, ಗೌನ್ ಸೇರಿದಂತೆ ಅಗತ್ಯ ಸಲಕರಣೆಗಳನ್ನು ಸಿದ್ಧಪಡಿಸಿಕೊಂಡಿದ್ದು, ಜಿಲ್ಲೆಯ ಜನತೆ ಯಾವುದಕ್ಕೂ ಹೆದರುವ ಅಗತ್ಯವಿಲ್ಲ ಎಂದು ಡಾ. ಮೋಹನ್ ತಿಳಿಸಿದ್ದಾರೆ.







