ದಿಲ್ಲಿ ಹಿಂಸಾಚಾರದ ಹೆಸರಿನಲ್ಲಿ ಉತ್ತರ ಪ್ರದೇಶದಲ್ಲಿ ಯುವಕರಿಗೆ ಥಳಿಸಿದ ಗುಂಪು

ಬುಲಂದಶಹರ್(ಉ.ಪ್ರ),ಮಾ.4: ಬುಲಂದಶಹರ್ ಜಿಲ್ಲೆಯಲ್ಲಿ ಇಬ್ಬರು ಮುಸ್ಲಿಮ್ ವ್ಯಕ್ತಿಗಳನ್ನು ಗುಂಪೊಂದು ಅತ್ಯಂತ ಬರ್ಬರವಾಗಿ ಥಳಿಸಿದ ಘಟನೆ ಸೋಮವಾರ ನಡೆದಿದ್ದು,ಥಳಿತದ ದೃಶ್ಯಗಳಿರುವ ವೀಡಿಯೊ ಬುಧವಾರ ಆನ್‌ಲೈನ್‌ನಲ್ಲಿ ವೈರಲ್ಆಗಿದೆ.
ದಾಳಿಕೋರರು ತಮ್ಮನ್ನು ಧರ್ಮದ ಹೆಸರಿನಲ್ಲಿ ನಿಂದಿಸಿದ್ದರು ಮತ್ತು ದನಗಳನ್ನು ಕೊಂದಿರುವುದಾಗಿ ಆರೋಪಿಸಿದ್ದರು ಎಂದು ಥಳಿತಕ್ಕೊಳಗಾದವರಲ್ಲೋರ್ವ ತಿಳಿಸಿದ್ದಾನೆ.
ಆರೇಳು ಜನರ ಗುಂಪೊಂದು ಈ ವ್ಯಕ್ತಿಗಳನ್ನು ಗುದ್ದುತ್ತ,ಕಾಲುಗಳಿಂದ ತುಳಿಯುತ್ತ ಕ್ರೂರವಾಗಿ ಹಲ್ಲೆ ನಡೆಸುತ್ತಿರುವ ಮತ್ತು ನೋವಿನಿಂದ ಬೊಬ್ಬೆ ಹೊಡೆಯುತ್ತಿದ್ದ ಸಂತ್ರಸ್ತರು ತಮ್ಮ ಮೇಲೆ ಕರುಣೆ ತೋರಿಸುವಂತೆ ಹಲ್ಲೆಕೋರರನ್ನು ದೈನ್ಯದಿಂದ ಕೋರಿಕೊಳ್ಳುತ್ತಿರುವ ದೃಶ್ಯಗಳು ವೀಡಿಯೊದಲ್ಲಿ ದಾಖಲಾಗಿವೆ.
“ನಾವು ಕ್ಯಾರೆಟ್ ತರಲು ಮಾರುಕಟ್ಟೆಗೆ ಹೋಗುತ್ತಿರುವಾಗ ಬೈಕ್‌ಗಳಲ್ಲಿ ಬಂದಿದ್ದ ಗುಂಪೊಂದು ನಮ್ಮನ್ನು ಎಳೆದೊಯ್ದು ಹಲ್ಲೆ ನಡೆಸಿದೆ. ಇದು ದಿಲ್ಲಿ ಎಂದು ನೀವುಭಾವಿಸಿದ್ದೀರಾ ಎಂದು ಹಲ್ಲೆಕೋರರು ನಮ್ಮನ್ನು ಪ್ರಶ್ನಿಸಿದ್ದರು” ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
‘ದಿಲ್ಲಿ ಹಿಂಸಾಚಾರಕ್ಕೂ ನಮಗೂ ಸಂಬಂಧವಿಲ್ಲ. ನಾವೆಲ್ಲ ಇಲ್ಲಿ ಸೋದರರಂತಿದ್ದೇವೆ’ ಎಂದೂ ಅವರು ಹೇಳಿದರು.
ಪೊಲೀಸರು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರಾದರೂ ಗಂಭೀರವಾಗಿ ಪರಿಗಣಿಸಿಲ್ಲ. ಇದು ಎರಡು ಗುಂಪುಗಳ ನಡುವಿನ ಜಗಳವಾಗಿದ್ದು,ಹುಡುಗಿಯರ ಚುಡಾವಣೆೆ ಕಾರಣವಾಗಿರಬಹುದು ಎಂದು ಪೊಲೀಸರು ಹೇಳಿದ್ದಾರೆ.







