ಉಡುಪಿ: ಪಿಯುಸಿ ಪರೀಕ್ಷೆಗೆ ಸಮವಸ್ತ್ರ ಧರಿಸದೇ ಬಂದ ವಿದ್ಯಾರ್ಥಿನಿಯ ಮನೆಗೆ ಕಳುಹಿಸಿದ ಉಪನ್ಯಾಸಕಿ !

ಸಾಂದರ್ಭಿಕ ಚಿತ್ರ
ಉಡುಪಿ, ಮಾ.4: ಕಾಲೇಜಿನ ಸಮವಸ್ತ್ರ ಧರಿಸದೇ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿನಿಯನ್ನು ಮರಳಿ ಮನೆಗೆ ಕಳುಹಿಸಿದ ಘಟನೆ ಬುಧವಾರ ಪ್ರಾರಂಭಗೊಂಡ ದ್ವಿತೀಯ ಪಿಯುಸಿ ಪರೀಕ್ಷೆಯ ಮೊದಲ ದಿನ ನಗರದ ಎಂಜಿಎಂ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ನಡೆದಿದೆ.
ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿನಿ ಕಾಲೇಜು ಸಮವಸ್ತ್ರ ಧರಿಸಿಲ್ಲ ವೆಂದು ಆಕ್ಷೇಪಿಸಿದ ಉಪನ್ಯಾಸಕಿ, ಸಮವಸ್ತ್ರ ಧರಿಸಿ ಬರುವಂತೆ ಮನೆಗೆ ವಾಪಾಸು ಕಳುಹಿಸಿದ್ದರು. ಉಪನ್ಯಾಸಕಿಯ ಕಟ್ಟುನಿಟ್ಟಿನ ಆದೇಶದಿಂದ ವಿಚಲಿತಗೊಂಡ ವಿದ್ಯಾರ್ಥಿನಿ ಎಂಜಿಎಂ ಕಾಲೇಜಿನಿಂದ ಸುಮಾರು 2.5 ಕಿ.ಮೀ ದೂರದ ಮಿಷನ್ ಕಂಪೌಂಡ್ನ ತನ್ನ ಮನೆಗೆ ಗಡಿಬಿಡಿಯಲ್ಲಿ ಅಟೋದಲ್ಲಿ ತೆರಳಿ ಸಮವಸ್ತ್ರ ಧರಿಸಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಪರೀಕ್ಷೆ ಬರೆದಿದ್ದಾಳೆ ಎಂದು ತಿಳಿದುಬಂದಿದೆ.
ಪರೀಕ್ಷಾ ಕೇಂದ್ರದಲ್ಲಿ ಶಿಕ್ಷಕಿ ವಿದ್ಯಾರ್ಥಿನಿಯನ್ನು ನಡೆಸಿಕೊಂಡಿರುವ ಕ್ರಮದ ಬಗ್ಗೆ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದು, ಕಾಲೇಜು ಆಡಳಿತ ಮಂಡಳಿ ನಡೆಯನ್ನು ಖಂಡಿಸಿದ್ದಾರೆ.
ಪದವಿ ಪೂರ್ವ ಶಿಕ್ಷಣ ಇಲಾಖೆ ಪರೀಕ್ಷೆಗೆ ಸಮವಸ್ತ್ರ ಕಡ್ಡಾಯ ಮಾಡಿಲ್ಲ. ಹಾಲ್ ಟಿಕೆಟ್ ಮರೆತು ಬಂದರೂ ಬದಲಿ ವ್ಯವಸ್ಥೆ ಮಾಡಿ ಪರೀಕ್ಷೆಗೆ ಅವಕಾಶ ನೀಡಲಾಗುತ್ತದೆ. ಆದರೆ ಸಮವಸ್ತ್ರ ಧರಿಸಿಲ್ಲ ಎಂದು ವಿದ್ಯಾರ್ಥಿನಿಯನ್ನು ಮನೆಗೆ ಕಳುಹಿಸಿರುವುದು ಸರಿಯಲ್ಲ. ಮುಂದಿನ ಪರೀಕ್ಷೆಗೆ ಸಮವಸ್ತ್ರ ಧರಿಸಿಕೊಂಡು ಬರುವಂತೆ ಸೂಚನೆ ಕೊಡಬಹುದಿತ್ತು ಎಂದು ವಿದ್ಯಾರ್ಥಿನಿಯ ತಾಯಿ ಮಂಜುಳಾ ಕೆ. ಬೇಸರ ವ್ಯಕ್ತಪಡಿಸಿದ್ದಾರೆ.
‘ನಾವು ಯಾವ ಮಕ್ಕಳಿಗೂ ಸಮವಸ್ತ್ರ ಕಡ್ಡಾಯವೆಂದು ಒತ್ತಡ ಹಾಕಿಲ್ಲ. ತೊಂದರೆಯನ್ನೂ ಕೊಟ್ಟಿಲ್ಲ. ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿಕೊಂಡು ಪರೀಕ್ಷೆಗೆ ಹೋಗಿದ್ದಾರೆ. ಬೇರೆ ಕಾಲೇಜಿನ ಶಿಕ್ಷಕರು ಏನು ಹೇಳಿದ್ದಾರೆ ಗೊತ್ತಿಲ್ಲ’ ಎಂದು ಎಂಜಿಎಂ ಕಾಲೇಜಿನ ಮುಖ್ಯಸ್ಥರು ತಿಳಿಸಿದ್ದಾರೆ.
ಸಮವಸ್ತ್ರ ಕಡ್ಡಾಯವಲ್ಲ
ಪರೀಕ್ಷೆಯ ಸಂದರ್ಭದಲ್ಲಿ ಕಾಲೇಜಿನ ಸಮವಸ್ತ್ರ ಕಡ್ಡಾಯವೆಂದು ಇಲಾಖೆ ಹೇಳಿಲ್ಲ. ಪರೀಕ್ಷೆಗೆ ಬಂದ ವಿದ್ಯಾರ್ಥಿ ಗಳಲ್ಲಿ ಹಾಲ್ ಟಿಕೇಟ್ ಹಾಗೂ ಗುರುತು ಚೀಟಿ ಮಾತ್ರ ಕಡ್ಡಾಯವಾಗಿದೆ. ಇವುಗಳನ್ನು ಮಾತ್ರ ನೋಡಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಕೇಂದ್ರದ ಅಧೀಕ್ಷಕರಿಗೆ ಕಟ್ಟನಿಟ್ಟಿನ ಸೂಚನೆಯನ್ನು ನೀಡಿದ್ದೇನೆ. ಇಂಥ ಕ್ರಮದಿಂದ ಪರೀಕ್ಷೆ ಬರೆಯುವ ಒತ್ತಡದಲ್ಲಿರುವ ವಿದ್ಯಾರ್ಥಿಗಳು ನಿಜವಾಗಿ ಅಪ್ಸೆಟ್ ಆಗುತ್ತಾರೆ.
-ಭಗವಂತ್ ಕಟ್ಟಿಮನಿ, ಡಿಡಿಪಿಯು ಉಡುಪಿ







