ಭ್ರಷ್ಟ ಅಧಿಕಾರಿಗಳಿಗೆ ಸ್ಮಾರ್ಟ್‍ಸಿಟಿ ಕೆಲಸ: ಸೊಗಡು ಶಿವಣ್ಣ ಆರೋಪ

ತುಮಕೂರು,ಮಾ.4: ತುಮಕೂರು ಮಹಾನಗರ ಪಾಲಿಕೆ ಆಯುಕ್ತ ಭೂಬಾಲನ್ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ, ಆದರೆ ಇವರು ಭ್ರಷ್ಟ ಅಧಿಕಾರಿಗಳಿಗೆ ಸ್ಮಾರ್ಟ್‍ಸಿಟಿ ಕೆಲಸ ಹಂಚಿದ್ದಾರೆ, ಜೊತೆಗೆ ಪಾಲಿಕೆಯಲ್ಲಿ ಆರ್ ಟಿ ಐ ಕಾರ್ಯಕರ್ತರ ಹಾವಳಿ ಹೆಚ್ಚಾಗಿದೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಆರೋಪಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಾಲಿಕೆಯಲ್ಲಿ 41 ಇಂಜಿನಿಯರ್‍ಗಳು ಸೇರಿ ವಿವಿಧ ಇಲಾಖೆಯಲ್ಲಿ ಸುಮಾರು 100ಕ್ಕೂ ಹೆಚ್ಚು ಇಂಜಿನಿಯರ್‍ಗಳಿದ್ದಾರೆ, ಆದರೆ ಅವರು ನಗರದ ಅಭಿವೃದ್ಧಿ ಮಾಡುವ ಬದಲು ಅಧ್ವಾನ ಮಾಡುತ್ತಾ ಹಣ ಲೂಟಿ ಹೊಡೆಯುತ್ತಿದ್ದಾರೆ, ತುಮಕೂರು ನಗರದ ಮುಂದೆ ರೋಗದ ನಗರವಾದರೂ ಅಚ್ಚರಿ ಪಡಬೇಕಿಲ್ಲ ಎಂದು ಹೇಳಿದರು.
ಇನ್ನು ಇಮ್ರಾನ್ ಪಾಶ ಎಂಬ ಆರ್ ಟಿಐ ಗಿರಾಕಿ ಪಾಲಿಕೆಯಲ್ಲೇ ಠಿಕಾಣಿ ಹೂಡುತ್ತಾನೆ, ಮಾಹಿತಿ ಹಕ್ಕಿನಲ್ಲಿ ಅರ್ಜಿ ಹಾಕಿ ಅಧಿಕಾರಿಗಳನ್ನು ಹೆದರುಸುತ್ತಾನೆ, ಹೀಗೆ ಹೆದರಿಸಿ ಈತ 20 ಲಕ್ಷದ ಕೆಲಸ ತೆಗೆದುಕೊಂಡಿದ್ದಾರೆ, ಇಂಥವರನ್ನು ಭೂಬಾಲನ್ ಮೊದಲು ದೂರವಿಟ್ಟು ಮಟ್ಟ ಹಾಕಲಿ ಎಂದರು.
ನನ್ನ ಮಗ ನಡೆಸುವ ಹೋಟೆಲ್‍ಗೆ ಟ್ರೇಡ್ ಲೈಸನ್ಸ್ ಇಲ್ಲ, ಅದಕ್ಕೆ ಅಧಿಕಾರಿಗಳು ನೋಟಿಸ್ ನೀಡಬೇಕಿತ್ತು, ಕಾನೂನು ಎಲ್ಲರಿಗೂ ಒಂದೆ, ಅದರಂತೆ ನಾವು ಈಗ ಲೈಸನ್ಸ್ ಮಾಡಿಸಿದ್ದೇವೆ, ಆರ್‍ಟಿಐ ಗಿರಾಕಿ ಈ ವಿಷಯವನ್ನೇ ಫೇಸ್‍ಬುಕ್‍ನಲ್ಲಿ ಹಾಕಿ ನನ್ನ ಹೆಸರಿಗೆ ಮಸಿ ಬಳಿಯಲು ಮುಂದಾಗಿದ್ದ, ಆದರೆ ಇಂಥ ಸಾವಿರ ವ್ಯಕ್ತಿಗಳನ್ನು ನೋಡಿದ್ದೇನೆ, ಇಂಥ ಗಿರಾಕಿಗಳಿಗೆ ಹೆದರುವ ಜಾಯಮಾನ ನನ್ನದಲ್ಲ ಎಂದರು.
ಇನ್ನು ಮಾಜಿ ಶಾಸಕ ರಫಿಕ್ ಅಹಮದ್ ಅವರು ನಗರದ ಟ್ರಕ್ ಟರ್ಮಿನಲ್ ಬಳಿ ಖರಾಬು ಜಮೀನಿಗೆ ಖಾತೆ ಮಾಡಿಸಿ ಮುಂಖಡ ಆಟೋರಾಜನ ಹೆಸರಿಗೆ ಮಾಡಿಸಿದ್ದಾರೆ, ನನ್ನನ್ನು ವಾಟಾಳ್ ನಾಗರಾಜ್‍ಗೆ ಹೋಲಿಸಿದ ರಫಿಕ್ ಅಹಮದ್ ಈಗ ಯಾಕೆ ಸರ್ಕಾರಿ ಜಾಗ ನುಂಗಿದ್ದಾರೆ ಎಂಬುದನ್ನು ಹೇಳಲಿ, ಈ ಬಗ್ಗೆ ಸಂಬಂಧಪಟ್ಟವರು ತನಿಖೆ ಮಾಡಬೇಕು ಎಂದರು.
ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಬಗ್ಗೆ ಶಾಸಕ ಯತ್ನಾಳ್ ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿತಿಸಿ, ದೊರೆಸ್ವಾಮಿ ಅವರು ಸ್ವಾತಂತ್ರ್ಯ ಹೋರಾಟಗಾರರು ನಿಜ, ಆದರೆ ಕಾಂಗ್ರೆಸ್‍ನವರು, ಸೋಷಿಯಲಿಸ್ಟ್‍ಗಳು ಅವರನ್ನು ಕುಣಿಸಲು ಹೊರಟರು, ಜೆಪಿ ಚಳವಳಿ ವೇಳೆ ದೊರೆಸ್ವಾಮಿ, ಸಿದ್ದರಾಮಯ್ಯ ಎಲ್ಲಿದ್ದರು, ದೇಶ ದ್ರೋಹಿಗಳಿಗೆ ಬೆಂಬಲ ನೀಡುವ ಇವರು ದೇಶದ್ರೋಹಿಗಳು, ಶಾಸಕ ಯತ್ನಾಳ್ ಹೇಳಿಕೆ ಸರಿಯಾಗಿದೆ ಎಂದು ಶಿವಣ್ಣ ಸಮರ್ಥಿಸಿಕೊಂಡರು.
ಮುಖಂಡರಾದ ಜಯಸಿಂಹ, ಬನಶಂಕರಿಬಾಬು, ನಂಜುಂಡಪ್ಪ ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು.







