200 ರೂ.ಗೆ ಮಂಗಳೂರಿನಿಂದ ಲಕ್ಷದ್ವೀಪಕ್ಕೆ ಹಡಗಿನಲ್ಲಿ ಪ್ರಯಾಣ
ಪ್ರವಾಸಿಗರು ಏನು ಮಾಡಬೇಕು ? ಇಲ್ಲಿದೆ ಸಂಪೂರ್ಣ ವಿವರ

ಮಂಗಳೂರು, ಮಾ.4: ನಗರದ ಹಳೆ ಬಂದರಿನಿಂದ ಲಕ್ಷದ್ವೀಪಕ್ಕೆ 150 ಮಂದಿ ಪ್ರಯಾಣಿಕರನ್ನು ಹೊತ್ತ ಹಡಗು ಇಂದು ಹೊರಟಿದೆ. ಈ ಮೂಲಕ ಮಂಗಳೂರು ಹಾಗೂ ಲಕ್ಷದ್ವೀಪದ ನಡುವೆ ಪ್ರಯಾಣಿಕ ಹಡಗಿನ ಕಾರ್ಯಾಚರಣೆ ಪುನರಾರಂಭಗೊಂಡಿದೆ.
ಎಂ.ವಿ. ಮಿನಿಕಾಯ್ ಹಡಗು ಮಂಗಳೂರು ಹಳೆಯ ಬಂದರಿನಿಂದ ಇಂದು ಮಧ್ಯಾಹ್ನ ನೌಕಾಯಾನ ಆರಂಭಿಸಿದೆ. ಮಂಗಳೂರಿನ ಜನರು ಕೊಚ್ಚಿ ಮಾರ್ಗದ ಮೂಲಕ ಲಕ್ಷದ್ವೀಪಕ್ಕೆ ತೆರಳುವ ಬದಲು ಹಳೆ ಬಂದರಿನಿಂದ ಹಡಗಿನ ಮೂಲಕ ಪ್ರಯಾಣ ಬೆಳೆಸಬಹುದಾಗಿದೆ. ಆದರೆ ಹೋಗಲು ಇಚ್ಚಿಸುವವರು ಲಕ್ಷದ್ವೀಪದಿಂದ ಪ್ರಾಯೋಜಕ ಪತ್ರವನ್ನು ಪಡೆಯಬೇಕು ಮತುತ ನಗರದ ಬಂದರ್‌ನಲ್ಲಿರುವ ಕೌಂಟರ್‌ನಲ್ಲಿ ಟಿಕೆಟ್ ಕಾಯ್ದಿರಿಸಬೇಕಿದೆ.
ಲಕ್ಷದ್ವೀಪಗಳಿಗೆ ಪ್ರವೇಶ ನಿರ್ಬಂಧ: ಈ ದ್ವೀಪಗಳಿಗೆ ಭೇಟಿ ನೀಡಲು ಬಯಸುವವರು ಲಕ್ಷದ್ವೀಪ ಆಡಳಿತ ನೀಡುವ ಪ್ರವೇಶ ಪರವಾನಿಗೆಯನ್ನು ಪಡೆಯಬೇಕು. ಲಕ್ಷದ್ವೀಪಕ್ಕೆ ಪ್ರಯಾಣಿಸಲು ಬಯಸುವವರಿಗೆ ಲಕ್ಷದ್ವೀಪದ ನಿವಾಸಿ ಪ್ರಾಯೋಜಕತ್ವವನ್ನು ವಹಿಸಬೇಕಾಗುತ್ತದೆ. ಲಕ್ಷ್ಮದ್ವೀಪದಲ್ಲಿ ಆಡಳಿತದ ಮೂಲಕ ಪ್ರಾಯೋಜಕರು ಅಗತ್ಯ ದಾಖಲೆಗಳನ್ನು ಅಂತಿಮಗೊಳಿಸಬೇಕು. ಬಳಿಕ ಮಾನ್ಯತೆ ಹೊಂದಿದ ಗುರುತಿನ ಚೀಟಿ ಮೂಲಕ ಟಿಕೆಟ್ ಬುಕ್ ಮಾಡಬೇಕಾಗುತ್ತದೆ. ಈ ಸೇವೆ ಹಿಂದೆಯೂ ಆರಂಭಿಸಲಾಗಿತ್ತು. ಆದರೆಕೆಲ ವರ್ಷಗಳ ಹಿಂದೆ ಹಲವಾರು ತಾಂತ್ರಿಕ ಅಡೆತಡೆಗಳಿಂದಾಗಿ ಈ ಪ್ರಯಾಣಿಕ ಹಡಗಿನ ಪ್ರಯಾಣವನ್ನು ರದ್ದುಗೊಳಿಸಲಾಗಿತ್ತು.
ಇಂದು ಲಕ್ಷದ್ವೀಪಕ್ಕೆ ಪ್ರಯಾಣ ಆರಂಭಿಸಿರುವ ಹಡಗು 150 ಆಸನಗಳನ್ನು ಹೊಂದಿದ್ದು, ಟಿಕೆಟ್ ದರ ತಲಾ 200 ರೂ.ಗಳನ್ನು ನಿಗದಿಪಡಿಸಾಗಿದೆ.
ಬಂದರ್‌ನಲ್ಲಿ ತಮ್ಮ ಕಚೇರಿ ಹಾಗೂ ಇತರ ಮೂಲಭೂತ ಸೌಕರ್ಯಗಳ ಸ್ಥಾಪನೆಗೆ 2015ರಲ್ಲಿ ದಕ್ಷಿಣ ಕನ್ನಡ ಕರಾವಳಿ ನಿಯಂತ್ರಣ ವಲಯ ನಿರ್ವಹಣಾ ಸಮಿತಿ ಲಕ್ಷದ್ವೀಪ ಆಡಳಿತಕ್ಕೆ ನಿರಪೇಕ್ಷಣಾ ಪತ್ರ (ಎನ್‌ಒಸಿ)ವನ್ನು ನೀಡಿತ್ತು. ಲಕ್ಷದ್ವೀಪ ಆಡಳಿತ ಮತ್ತು ಕರ್ನಾಟಕ ಬಂದರು ಇಲಾಖೆ ಬಂದರು, ಪ್ರಯಾಣಿಕರ ತಂಗುವ ತಾಣ, ಸರಕುಗಳ ಶೆಡ್‌ಗಳು ಮತ್ತು ಇತರ ಸೌಲಭ್ಯಗಳನ್ನು 50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಯೋಜನೆ ರೂಪಿಸಿತ್ತು. ಈ ಉದ್ದೇಶಕ್ಕೆ 8,000 ಚದರ ಮೀಟರ್ ಭೂಮಿಯನ್ನು ಲಕ್ಷದ್ವೀಪ ಆಡಳಿತಕ್ಕೆ ನೀಡಲು ಬಂದರು ಇಲಾಖೆ ಒಪ್ಪಿಕೊಂಡಿತ್ತು. ಆದರೆ, ಯೋಜನೆ ಇನ್ನೂ ಕಾರ್ಯಗತವಾಗಿಲ್ಲ.







