ಗರ್ಭಿಣಿ-ಬಾಣಂತಿಯರ ಮನೆ ಬಾಗಿಲಿಗೆ ಪೌಷ್ಠಿಕ ಆಹಾರ: ಸಚಿವೆ ಶಶಿಕಲಾ ಜೊಲ್ಲೆ

ಬೆಂಗಳೂರು, ಮಾ.4: ಗರ್ಭಿಣಿ ಮತ್ತು ಬಾಣಂತಿಯರ ಮನೆ ಬಾಗಿಲಿಗೆ ಮಾತೃಪೂರ್ಣ ಯೋಜನೆಯ ಮೂಲಕ ಪೂರಕ ಪೌಷ್ಠಿಕ ಆಹಾರ ಪೂರೈಸುವ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಬುಧವಾರ ವಿಧಾನಸಭೆಯಲ್ಲಿ ಚುಕ್ಕೆ ಗುರುತಿನ ಪ್ರಶ್ನೆ ಚರ್ಚೆ ವೇಳೆಯಲ್ಲಿ ಬಿಜೆಪಿ ಶಾಸಕ ಡಾ.ಭರತ್ ಶೆಟ್ಟಿ ಅವರ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತೃ ಪೂರ್ಣ ಯೋಜನೆಯಡಿ ಅಲ್ಪ ಮಾರ್ಪಾಡಿನೊಂದಿಗೆ ಪೌಷ್ಠಿಕ ಆಹಾರವನ್ನು ಫಲಾನುಭವಿಗಳ ಮನೆಗಳಿಗೆ ನೇರವಾಗಿ ವಿತರಿಸಲು ಸಾಧ್ಯವಿದೆಯೇ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಧ್ಯಾಹ್ನದ ಕಡು ಬಿಸಿಲಿನಲ್ಲಿ ಗುಡ್ಡಗಳನ್ನು ಹತ್ತಿ ಅಂಗನವಾಡಿ ಕೇಂದ್ರಗಳಿಗೆ ಫಲಾನುಭವಿಗಳು ಬರಬೇಕಾಗಿದ್ದು, ಕೆಲ ಫಲಾನುಭವಿಗಳ ಮನೆಗಳು ಅಂಗನವಾಡಿ ಕೇಂದ್ರಗಳಿಂದ ಸುಮಾರು 6ರಿಂದ 7 ಕಿ.ಮೀ ಅಂತರವಿರುವುದರಿಂದ ಇಂತಹ ಸಂದರ್ಭದಲ್ಲಿ ಮನೆಗೆ ಆಹಾರ ಸರಬರಾಜು ಮಾಡುವ ಚಿಂತನೆ ಇದೆ ಎಂದರು. ಅಲ್ಲದೆ, ಈ ಸಂಬಂಧ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯಲ್ಲಿ ನಿರ್ಣಯಿಸಲಾಗಿದ್ದು, ಯಾವ ರೀತಿ ಕ್ರಮ ವಹಿಸಬೇಕೆಂದು ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸದನಕ್ಕೆ ಮಾಹಿತಿ ನೀಡಲಾಗುವುದು ಎಂದರು.
ಇದೇ ವೇಳೆ ಮಧ್ಯ ಪ್ರವೇಶಿಸಿದ ಮಾಜಿ ಸಚಿವ ಯು.ಟಿ.ಖಾದರ್, ಈ ಹಿಂದೆ ಫಲಾನುಭವಿಗಳಿಗೆ ನೀಡುತ್ತಿದ್ದ 3 ಅಕ್ಕಿ, ಗೋಧಿ, ಹಸಿರು ಕಾಳು ಹಾಗೂ ತಾಯಿ ಕಾರ್ಡ್ ಅನ್ನು ಮುಂದುವರೆಸಿಕೊಂಡು ಬರಬೇಕೆಂದು ಮನವಿ ಮಾಡಿದರು. ಜೊತೆಗೆ, ಮನೆ ಪಕ್ಕದಲ್ಲಿಯೇ ಅಂಗನವಾಡಿ ಇರಬೇಕೇ ಹೊರತು, 7 ಕಿಲೋ ಮೀಟರ್ ದೂರದಲ್ಲಿ ಇರಬಾರದು. ಇದನ್ನು ಸರಿಪಡಿಸಿ, ಅರ್ಧ ಅಥವಾ ಒಂದು ಕಿ. ಮೀಟರ್‌ಗೆ ಬದಲಾಯಿಸಬೇಕೆಂದು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಶಶಿಕಲಾ ಜೊಲ್ಲೆ, ನಮ್ಮ ಸರಕಾರ ಇತ್ತೀಚೆಗಷ್ಟೇ ಅಧಿಕಾರಕ್ಕೆ ಬಂದಿದ್ದು, ಈ ಎಲ್ಲ ಬದಲಾವಣೆ ಸಂಬಂಧ ಅಧಿಕಾರಿ ವರ್ಗದೊಂದಿಗೆ ಚರ್ಚೆ ನಡೆಸಲಾಗುವುದೆಂದು ವಿಶ್ವಾಸ ವ್ಯಕ್ತಪಡಿಸಿದರು.







