ಚಿಕ್ಕಮಗಳೂರಿನಲ್ಲಿ ಮಾ.7ರಂದು ಸಿಎಎ ವಿರೋಧಿ ಸಮಾವೇಶ: ಸಿದ್ದರಾಮಯ್ಯ, ಎಚ್ಡಿಕೆ ಭಾಗಿ

ಚಿಕ್ಕಮಗಳೂರು, ಮಾ.4: ಕೇಂದ್ರ ಸರಕಾರದ ಪೌರತ್ವ ತಿದ್ದುಪಡಿ ಕಾಯ್ದೆ ಸಂವಿಧಾನಕ್ಕೆ ವಿರುದ್ಧವಾಗಿದ್ದು, ಕಾಯ್ದೆಯ ಜಾರಿಯನ್ನು ವಿರೋಧಿಸಿ ಮಾರ್ಚ್ 7ರಂದು ಬೆಳಗ್ಗೆ 10ಕ್ಕೆ ನಗರದ ಜಿಲ್ಲಾ ಆಟದ ಮೈದಾನದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶವನ್ನು ಅಯೋಜಿಸಲಾಗಿದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಹೊರತುಪಡಿಸಿ ಜೆಡಿಎಸ್, ಕಾಂಗ್ರೆಸ್, ಸಿಪಿಐ, ಬಿಎಸ್ಪಿ ಸೇರಿದಂತೆ ರೈತ, ಕಾರ್ಮಿಕ, ದಲಿತ ಪರ ಹಾಗೂ ಎಲ್ಲ ಪ್ರಗತಿಪರ ಸಂಘಟನೆಗಳು, ಮುಸ್ಲಿಮ್ ಸಂಘಟನೆಗಳು ಸಮಾವೇಶದಲ್ಲಿ ಭಾಗವಹಿಸಲಿವೆ. ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ, ಸಿಪಿಐ ವರಿಷ್ಠ ಸಿದ್ದನಗೌಡ ಪಾಟೀಲ್, ಬಿಎಸ್ಪಿಯ ಕೃಷ್ಣಮೂರ್ತಿ ಸೇರಿದಂತೆ ಇತರ ಮುಖಂಡರು ಸಮಾವೇಶದಲ್ಲಿ ಉಪನ್ಯಾಸ ನೀಡಲಿದ್ದು, ಕಾಯ್ದೆಯಿಂದಾಗುವ ಅನಾನುಕೂಲ, ದೋಷಗಳ ಬಗ್ಗೆ ಬೆಳಕು ಚೆಲ್ಲಲಿದ್ದಾರೆಂದು ಅವರು ಮಾಹಿತಿ ನೀಡಿದರು.
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಾ.7ರ ಸಮಾವೇಶಕ್ಕೆ ಅನುಮತಿ ನೀಡಬಾರದೆಂದು ಬಿಜೆಪಿ ಮುಖಂಡರು ಎಸ್ಪಿ ಹಾಗೂ ಡಿಸಿಗೆ ಮನವಿ ಸಲ್ಲಿಸಿರುವುದು ಹಾಸ್ಯಾಸ್ಪದವಾಗಿದೆ. ಜಿಲ್ಲೆಯ ಇತಿಹಾಸದಲ್ಲಿ ತಾನೂ ಸೇರಿದಂತೆ ಪ್ರಗತಿಪರ ಸಂಘಟನೆಗಳು ಅನೇಕ ಹೋರಾಟಗಳನ್ನು ರೂಪಿಸಿವೆ. ಈ ವೇಳೆ ಒಂದೇ ಒಂದು ಕಾನೂನು ಉಲ್ಲಂಘನೆಯ ಪ್ರಕರಣ ನಡೆದಿಲ್ಲ. ಜೈಲಿಗೆ ಹೋಗುವ ಸಂದರ್ಭ ಎದುರಾಗಿದ್ದರೂ ನಾವು ಕಾನೂನು ಉಲ್ಲಂಘಿಸಿರುವ ಒಂದೇ ಒಂದು ಘಟನೆ ನಡೆದಿಲ್ಲ. ಆದರೂ ಬಿಜೆಪಿಯವರು ಹೋರಾಟಕ್ಕೆ ಅನುಮತಿ ನೀಡಬಾರದೆಂದು ಮನವಿ ನೀಡಿರುವುದು ಬಿಜೆಪಿಯವರ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಎಂ.ಎಲ್.ಮೂರ್ತಿ ಮಾತನಾಡಿ, ಕೋಮುವಾದ ಎಂಬುದು ಬಿಜೆಪಿ ಆಳ್ವಿಕೆಯಲ್ಲಿ ವಿಜೃಂಭಿಸುತ್ತಿದೆ. ದಿಲ್ಲಿಯಲ್ಲಿ ಸಿಎಎ ವಿರುದ್ಧದ ಹೋರಾಟದ ವೇಳೆ ಅಲ್ಪಸಂಖ್ಯಾತರು ತೊಂದರೆಗೀಡಾದಾಗ ಬಹುಸಂಖ್ಯಾತ ಸಮುದಾಯದ ಜನರು ರಕ್ಷಣೆಗೆ ಮುಂದಾದ ಮಾನವೀಯ ಘಟನೆಗಳು ಅಲ್ಲಲ್ಲಿ ವರದಿಯಾಗಿವೆ. ಕೋಮುವಾದ ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತರಿಗೆ ಬೇಕಿಲ್ಲ ಎಂಬುದು ಇಂತಹ ಘಟನೆಗಳಿಂದ ರುಜುವಾತಾಗಿದೆ. ಆದರೆ ಕೋಮುವಾದ ಬಿಜೆಪಿಯ ರಾಜಕೀಯ ಅಧಿಕಾರಕ್ಕೆ ಬೇಕಾಗಿದ್ದು, ಇದರ ಫಲವಾಗಿ ಶಾಂತಿಯುವ ಹೋರಾಟದ ವೇಳೆ ಗಲಭೆೆಗಳಿಗೆ ಬಿಜೆಪಿ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿದರು.
ಜಿಲ್ಲಾ ಉತ್ಸವನ್ನು ಚಿಕ್ಕಮಗಳೂರಿನಲ್ಲಿ ಪ್ರತಿದಿನ ನಡೆಸುವಂತಹ ವಾತಾವಾರಣ, ಪ್ರಕೃತಿ ಸೌಂದರ್ಯವಿದೆ. ಆದರೆ ನಗರದಲ್ಲಿರುವ ಎರಡು ಕೆರೆಗಳು ಅಭಿವೃದ್ಧಿ ಇಲ್ಲದೇ ಗಬ್ಬುನಾರುತ್ತಿವೆ. ರಸ್ತೆಗಳು ಗುಂಡಿ ಬಿದ್ದು ನಾಗರಿಕರು ಅಪಘಾತದಿಂದ ಸಾಯುತ್ತಿದ್ದಾರೆ. ನಾಲ್ಕು ಬಾರಿ ಶಾಸಕರಾಗಿ ಎರಡು ಬಾರಿ ಸಚಿವರಾಗಿರುವ ಸಿ.ಟಿ.ರವಿ ಅವರು ಜಿಲ್ಲೆಯಲ್ಲಿ ಅಭಿವೃದ್ಧಿಯ ಹಬ್ಬ ಮಾಡದೆ ತಮ್ಮ ಪಕ್ಷದ ಹಬ್ಬವನ್ನು ಮಾಡಿದ್ದಾರೆ ಎಂದು ಟೀಕಿಸಿದ ಮೂರ್ತಿ, ಉತ್ಸವಕ್ಕೆ ಜಿಲ್ಲಾ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ್ದರೂ ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಭಾಗವಹಿಸಿದ್ದರು. ಅದು ಅವರ ವೈಯಕ್ತಿಕ ತೀರ್ಮಾನವಾಗಿದೆ. ಶಾಸಕ ಟಿ.ಡಿ.ರಾಜೇಗೌಡ ಅವರನ್ನು ಮನವೊಲಿಸುವ ನಿಟ್ಟಿನಲ್ಲಿ ಜಿಲ್ಲಾ ಕಾಂಗ್ರೆಸ್ ವಿಫಲವಾಗಿದೆ. ಇದರಲ್ಲಿ ಶಾಸಕರ ತಪ್ಪಿಲ್ಲ ಎಂದು ಇದೇ ವೇಳೆ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.
ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಸಿಪಿಐ ಮುಖಂಡ ರಘು, ಕಾಂಗ್ರೆಸ್ ಮುಖಂಡ ಶಿವಾನಂದಸ್ವಾಮಿ, ಹಿರೇಮಗಳೂರು ರಾಮಚಂದ್ರ, ನಿಸಾರ್ ಅಹ್ಮದ್ ಮತ್ತಿತರರಿದ್ದರು.
ಜಿಲ್ಲಾ ಉತ್ಸವದಿಂದ ಖಜಾನೆ ಲೂಟಿ
ಜಿಲ್ಲಾ ಉತ್ಸವಕ್ಕೆ ಕಾಂಗ್ರೆಸ್ ಸೇರಿದಂತೆ ಕೆಲ ಪಕ್ಷ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಈ ವಿರೋಧ ವೈಯಕ್ತಿಕವಾದುದಲ್ಲ. ಅತಿವೃಷ್ಟಿ ಸಂತ್ರಸ್ತರು ತೊಂದರೆಯಲ್ಲಿದ್ದಾಗ ಹಬ್ಬ ಮಾಡುವ ದುಡ್ಡಿನಲ್ಲಿ ಸಂತ್ರಸ್ತರಿಗೆ ಸರಕಾರ, ಜಿಲ್ಲಾಡಳಿತ ನೆರವು ಕಲ್ಪಿಸಲಿ ಎಂಬ ಕಳಕಳಿಯಿಂದ ವಿರೋಧ ವ್ಯಕ್ತಪಡಿಸಲಾಗಿತ್ತು. ಉತ್ಸವದ ಹೆಸರಿನಲ್ಲಿ ಸರಕಾರದ ಖಜಾನೆ ಲೂಟಿ ಮಾಡಲಾಗಿದೆ. ಉತ್ಸವದ ವೇಳೆ ನಗರದಲ್ಲಿ ನಿರ್ಮಿಸಲಾದ ಸ್ವಾಗತ ಕಮಾನನ್ನು ನಗರದವರು ಕೇವಲ 16 ಸಾವಿರ ಹಣದಲ್ಲಿ ಮಾಡಿಕೊಡುತ್ತೇವೆಂದು ಮನವಿ ಸಲ್ಲಿಸಿದ್ದರು. ಆದರೆ ಉತ್ಸವದ ಸಮಿತಿಯವರು ಹಾಸನ ಮೂಲದವರಿಗೆ 50 ಸಾವಿರಕ್ಕೆ ಕಮಾನುಗಳ ನಿರ್ಮಾಣಕ್ಕೆ ಗುತ್ತಿಗೆ ನೀಡಿ, ದುಂದು ವೆಚ್ಚ ಮಾಡುವ ಮೂಲಕ ಸರಕಾರದ ಖಜಾನೆಯನ್ನು ಲೂಟಿ ಮಾಡಲು ಅವಕಾಶ ಕಲ್ಪಿಸಿದ್ದಾರೆ.
- ಎಂ.ಎಲ್.ಮೂರ್ತಿ, ಕಾಂಗ್ರೆಸ್ ಮುಖಂಡ







