ವಾರ್ಡ್‌ಗಳ ಪುನರ್ ವಿಂಗಡನೆ: ಬಿಬಿಎಂಪಿ ಚುನಾವಣೆ ಆರು ತಿಂಗಳು ಮುಂದೂಡುವ ಸಾಧ್ಯತೆ

ಬೆಂಗಳೂರು, ಮಾ.4: ರಾಜ್ಯ ಸರಕಾರವು ಬಿಬಿಎಂಪಿ ವಾರ್ಡ್‌ಗಳ ಪುನರ್ ವಿಂಗಡಣೆ ಮಾಡಿ ಅಧಿಸೂಚನೆ ಹೊರಡಿಸಿರುವುದರಿಂದ ಮುಂಬರುವ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಬೇಕಿದ್ದ ಬಿಬಿಎಂಪಿ ಚುನಾವಣೆ ಕನಿಷ್ಠ ಆರು ತಿಂಗಳ ಕಾಲ ಮುಂದೂಡುವ ಸಾಧ್ಯತೆಗಳಿವೆ.
ಈಗಾಗಲೇ ಬಿಬಿಎಂಪಿ ವಾರ್ಡ್‌ಗಳ ಪುನರ್ ವಿಂಗಡಣೆ ಮಾಡಿ ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿರುವುದರ ಬಗ್ಗೆ ಆಕ್ಷೇಪಣೆಗೆ 15 ದಿನಗಳ ಕಾಲಾವಕಾಶ ನೀಡಿರುವುದರಿಂದ ಬಿಬಿಎಂಪಿ ಚುನಾವಣೆ ಮುಂದೂಡುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.
ಅಲ್ಲದೆ, ಮುಖ್ಯಮಂತ್ರಿ ಯಡಿಯೂರಪ್ಪ ನಾಳೆ (ಮಾ.5) ಮಂಡಿಸಲಿರುವ ಬಜೆಟ್ ಹಿನ್ನೆಲೆಯಲ್ಲಿ ಬಿಬಿಎಂಪಿಗೆ ತನ್ನದೇ ಆದ ಪ್ರತ್ಯೇಕ ಬೈಲಾವನ್ನು ಮಂಡಿಸುವ ಸಾಧ್ಯತೆ ಇದೆ. ಒಂದು ವೇಳೆ ಬಿಬಿಎಂಪಿಗೆ ಪ್ರತ್ಯೇಕ ಬೈಲಾ ಬಂದಲ್ಲಿ ಸಹಜವಾಗಿಯೇ ಸರಕಾರವು ನ್ಯಾಯಾಲಯಕ್ಕೆ ಸಲ್ಲಿಸಿರುವ ಅಧಿಸೂಚನೆಗೆ ಅರ್ಥವಿಲ್ಲದಂತಾಗುತ್ತದೆ. ಸರಕಾರವು ಪ್ರತ್ಯೇಕ ವಾರ್ಡ್ ವಿಂಗಡಣೆಯನ್ನು ತಯಾರಿಸಬೇಕಾಗಬಹುದು. ಅಲ್ಲದೆ, ಪ್ರಸ್ತುತ 2011ರ ಜನಗಣತಿ ಆಧರಿಸಿ ವಾರ್ಡ್ ಪುನರ್ ವಿಂಗಡಣೆಯ ಅಧಿಸೂಚನೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. 2021ರ ಜನಗಣತಿಯನ್ನು ಆಧರಿಸಿದರೆ, ವಾರ್ಡ್‌ಗಳಲ್ಲಿ ಜನಸಂಖ್ಯೆ ಏರುಪೇರು ಆಗಬಹುದು.
198 ವಾರ್ಡ್‌ಗಳನ್ನು 223ಕ್ಕೆ ಹೆಚ್ಚಳ ಮಾಡುವ ಸಂದರ್ಭವು ಎದುರಾಗಬಹುದು. ಒಂದು ವೇಳೆ 223ವಾರ್ಡ್‌ಗಳು ರಚನೆಯಾದಲ್ಲಿ ಆಯಾ ವಲಯಗಳಿಗೆ ಪ್ರತ್ಯೇಕ ಆಡಳಿತ ಅಧಿಕಾರಿಗಳು ನೇಮಕವಾಗಲಿದ್ದಾರೆ. ಈ ಎಲ್ಲ ಪ್ರಕ್ರಿಯೆಗಳು ನಡೆಯಲು ಕನಿಷ್ಠ 6 ರಿಂದ 8 ತಿಂಗಳು ಕಾಲಾವಕಾಶ ಬೇಕಾಗಬಹುದು. ಆದುದರಿಂದ ಸಹಜವಾಗಿಯೇ ಬಿಬಿಎಂಪಿ ಚುನಾವಣೆ ನಿಗದಿತ ಅವಧಿಗೆ ನಡೆಯದೇ ಆರು ತಿಂಗಳು ಮುಂದೂಡುವ ಸಾಧ್ಯತೆಗಳು ದಟ್ಟವಾಗಿದೆ.





