ಮೌಢ್ಯ ನಿಷೇಧ ಕಾಯ್ದೆ ನಡುವೆಯೂ ದೀಡು ನಮಸ್ಕಾರ, ಬೇವಿನ ಉಡುಗೆ ಹುಟ್ಟು ಹರಕೆ
ಮೌಡ್ಯಾಚಾರಣೆ ನಿಲ್ಲಿಸುವಂತೆ ಅರಿವು ಮೂಡಿಸಿದ ಡಿಸಿ, ಎಸ್ಪಿ

ದಾವಣಗೆರೆ: ಮೌಢ್ಯ ನಿಷೇಧ ಕಾಯ್ದೆ ನಡುವೆಯೂ ನಗರ ದೇವತೆ ದುಗ್ಗಮ್ಮನ ಜಾತ್ರೆಯಲ್ಲಿ ಭಕ್ತರು ದೀಡು ನಮಸ್ಕಾರ ಹಾಗೂ ಬೇವಿನ ಉಡುಗೆ ಹುಟ್ಟು ಹರಕೆ ತೀರಿಸಿದ ದೃಶ್ಯಗಳು ಕಂಡುಬಂದವು.
ಮಕ್ಕಳು ಹಾಗೂ ಮಹಿಳೆಯರು ಅರೆ ಬೆತ್ತಲೆಯಾಗಿ ಬೇವಿನ ಸೀರೆಯುಟ್ಟು ದೇವಸ್ಥಾನ ಪ್ರದಕ್ಷಿಣೆ ಮಾಡುತ್ತಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹಾಗೂ ಎಸ್.ಪಿ ಹನುಮಂತರಾಯ ಈ ರೀತಿ ಅರೆಬೆತ್ತಲೆಯ ಭಕ್ತಿ ಸಲ್ಲದು ಎಂದು ತರಾಟೆಗೆ ತೆಗೆದುಕೊಂಡು ಮೌಢ್ಯಾಚರಣೆ ನಿಲ್ಲಿಸುವಂತೆ ಅರಿವು ಮೂಡಿಸಿದರು.
ದೇವತೆ ದುಗ್ಗಮ್ಮ ದೇವಸ್ಥಾನದ ರಸ್ತೆಯಲ್ಲಿ ಮಕ್ಕಳಿಗೆ ಬೇವಿನ ಸೀರೆ ಉಡಿಸುತ್ತಿದ್ದ ಪೋಷಕರಿಗೆ ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಲ್ಲದೆ, ಈ ರೀತಿ ಮೂಢನಂಬಿಕೆಯಿಂದ ಮಕ್ಕಳಿಗೆ ಹಿಂಸೆ ನೀಡಬಾರದು ಎಂದು ತಿಳಿಹೇಳಿದರು. ನಂತರ ಎಸ್ ಪಿ ಹನುಮಂತರಾಯ ಕರ್ತವ್ಯದಲ್ಲಿ ಇದ್ದ ಪೋಲೀಸ್ ಸಿಬ್ಬಂದಿಗೂ ಕೂಡ ಕ್ಲಾಸ್ ತೆಗೆದುಕೊಂಡರು. ದೇವಸ್ಥಾನದ ಸುತ್ತಾಮುತ್ತ ಒಂದು ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಭದ್ರತೆ ವಹಿಸಿದ್ದರು.
ಕೋಟಿ, ಕೋಟಿ ಚಲಾವಣೆ; ದುಗ್ಗಮ್ಮ ಜಾತ್ರೆಯೆಂದರೆ ಕೋಟ್ಯಂತರ ರೂ.ವ್ಯವಹಾರ ನಡೆದಿದೆ. ಬಾಡೂಟದ ದಿನವಾದ ಬುಧವಾರದಂದು ಖರ್ಚು ಒಂದು ಲೆಕ್ಕಾಚಾರದ ಪ್ರಕಾರ ಹತ್ತಾರು ಕೋಟಿ ದಾಟಿದೆ. ಮಹಾನಗರದ ಅಂಕಿಸಂಖ್ಯೆ ಪ್ರಕಾರ ನಗರದಲ್ಲಿ 1.30 ಲಕ್ಷ ಮನೆಗಳಿವೆ. ಮನೆಗಳು, ಮಟನ್‍ಸ್ಟಾಲ್‍ಗಳು ಸೇರಿ ಸುಮಾರು 50 ಸಾವಿರ ಕುರಿಗಳು ಬಲಿಯಾಗಿವೆ ಎಂದು ಅಂದಾಜಿಸಲಾಗಿದೆ.








