ಕೊರೋನ ವೈರಸ್ ಕಾರಣಕ್ಕೆ ಟೋಕಿಯೊ ಒಲಿಂಪಿಕ್ಸ್ ರದ್ದಾಗದು
ಯೊಶಿರೊ

ಟೋಕಿಯೊ, ಮಾ.4: ಮಾರಣಾಂತಿಕ ಕೊರೋನ ವೈರಸ್ ಭೀತಿಯ ಕಾರಣಕ್ಕೆ ಒಲಿಂಪಿಕ್ ಗೇಮ್ಸ್ ನ್ನು ರದ್ದುಪಡಿಸಲಾಗುತ್ತದೆ ಎಂಬ ವದಂತಿಯನ್ನು 2020ರ ಟೋಕಿಯೊ ಒಲಿಂಪಿಕ್ಸ್ ಆಯೋಜನ ಸಮಿತಿಯ ಅಧ್ಯಕ್ಷರು ನಿರಾಕರಿಸಿದ್ದಾರೆ. ಗೇಮ್ಸ್ ರದ್ದುಪಡಿಸುವುದು ನಮ್ಮ ಮುಂದಿರುವ ಆಯ್ಕೆಯಲ್ಲ ಎಂದು ಸ್ಪಷ್ಟಪಡಿಸಿದರು.
‘‘ನಾನು ಗೇಮ್ಸ್ ರದ್ದುಪಡಿಸುವುದನ್ನು ಎಳ್ಳಷ್ಟು ಪರಿಗಣಿಸುವುದಿಲ್ಲ’’ ಎಂದು ಗೇಮ್ಸ್ ರದ್ದತಿ ಸಾಧ್ಯತೆ ಕುರಿತ ಸುದ್ದಿಗಾರರೊಂದಿಗೆ ಯೊಶಿರೊ ಮೊರಿ ಹೇಳಿದ್ದಾರೆ. ಒಲಿಂಪಿಕ್ಸ್ ನಲ್ಲಿ ಬದಲಾವಣೆ ಕುರಿತು ಆಯೋಜಕರು ನಿರ್ಧರಿಸಲಿದ್ದಾರೆಯೇ? ಎಂಬ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಮೊರಿ,’’ ನಾನು ದೇವರಲ್ಲ. ಹೀಗಾಗಿ ನನಗೇನು ಗೊತ್ತಿಲ್ಲ ಎಂದರು.
‘‘ಟೋಕಿಯೊ ಒಲಿಂಪಿಕ್ಸ್ ವೇಳಾಪಟ್ಟಿಯಂತೆಯೇ ನಡೆಯಲಿದೆ ಎಂಬ ಅಂತರ್‌ರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ಅಧ್ಯಕ್ಷ ಥಾಮಸ್ ಬೌಚ್ ಹೇಳಿಕೆ ಕೇಳಿ ನನಗೆ ಸಂತಸವಾಗಿದೆ. ಬೇಸಿಗೆ ಗೇಮ್ಸ್ ಜು.24ರಿಂದ ಆರಂಭವಾಗಲಿದೆ’’ಎಂದು ಟೋಕಿಯೊ ಒಲಿಂಪಿಕ್ಸ್ ಸಮಿತಿಯ ಸಿಇಒ ಆಗಿರುವ ಟೊಶಿರೊ ಮುಟೊ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.





