ನಿಷೇಧದ ನಡುವೆಯೂ ಕೋಣಬಲಿ: ವೀಡಿಯೊ ವೈರಲ್
ದಾವಣಗೆರೆ, ಮಾ.4: ಪ್ರಾಣಿಬಲಿ ನಿಷೇಧವಿದ್ದರೂ ಹಾಗೂ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮದ ನಡುವೆಯೂ ದುಗ್ಗಮ್ಮ ಜಾತ್ರೆಯಲ್ಲಿ ಕೋಣವೊಂದನ್ನು ಬಲಿ ನೀಡುವ ವೀಡಿಯೊ ವೈರಲ್ ಆಗಿದೆ.
ಕೋಣ ಬಲಿ ನೀಡಿದರೆ ದೇವಿ ಸಂತುಷ್ಟಳಾಗುತ್ತಾಳೆ ಎಂಬ ನಂಬಿಕೆಯಿಂದ ಭಕ್ತರು ಕೆಲ ಪ್ರದೇಶಗಳಲ್ಲಿ ಜಿಲ್ಲಾಡಳಿತದ ಕಣ್ಣುತಪ್ಪಿಸಿ ಕೋಣ ಬಲಿ ನೀಡಿದ್ದಾರೆ. ಪ್ರಾಣಿಬಲಿ ಸಂಪೂರ್ಣ ನಿಷೇಧವಿದೆ. ಅಲ್ಲದೆ ದೇವಸ್ಥಾನ ಸುತ್ತ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರು. ದೇವಸ್ಥಾನ ಸಮೀಪದಲ್ಲೇ ಇರುವ ಸೀಮೆಎಣ್ಣೆ ಬಂಕ್ ಬಳಿ ಕೋಣವನ್ನು ಬಲಿ ನೀಡಲಾಗಿದೆ ಎಂದು ಹೇಳಾಗುತ್ತಿದೆ.
ಕೋಣ ಬಲಿ ನೀಡದಂತೆ ಜಿಲ್ಲಾಡಳಿತ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿತ್ತು. ಡಿಸಿ ಮಹಾಂತೇಶ್ ಬೀಳಗಿ, ಎಸ್ಪಿ ಹನುಮಂತರಾಯ ರಾತ್ರಿಯಲ್ಲೇ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರೂ ಸಹ ಬೇರೊಂದು ಸ್ಥಳದಲ್ಲಿ ಕೋಣ ಬಲಿ ನೀಡಲಾಗಿದೆ. ಬಳಿಕ ಕೋಣದ ರಕ್ತದಲ್ಲಿ ಚರಗ ಹಾಕಿದ್ದಾರೆ. ಅಲ್ಲದೆ ದುಗ್ಗಮ್ಮ ದೇವಿಗೆ ಬಿಟ್ಟಂತಹ ಕೋಣದಿಂದ ಸಿರಿಂಜ್ ಮೂಲಕ ವೈದ್ಯರು ರಕ್ತವನ್ನು ತೆಗೆದು ದುಗ್ಗಮ್ಮ ದೇವಿಗೆ ಅರ್ಪಿಸಿದರು.
ದೇವಸ್ಥಾನದ ಆವರಣದಲ್ಲಿ ಕೋಣವನ್ನು ಬಲಿ ನೀಡುತ್ತಾರೆ ಎನ್ನುವ ಮಾಹಿತಿಯಿಂದ ಇಡೀ ರಾತ್ರಿ ದೇವಸ್ಥಾನ ಆವರಣದಲ್ಲಿ ಜಿಲ್ಲಾಧಿಕಾರಿ, ಎಸ್ಪಿ ಸೇರಿದಂತೆ ಹಲವು ಅಧಿಕಾರಿಗಳು ಜಾಗರಣೆ ಮಾಡಿದರು.







