ಎಸ್ಸೆಸ್ಸೆಲ್ಸಿ ಪರೀಕ್ಷೆ: ಮಕ್ಕಳಲ್ಲಿ ಸಕಾರಾತ್ಮಕ ಭಾವನೆ ಬೆಳೆಸಿ, ಆತ್ಮಸ್ಥೈರ್ಯ ತುಂಬಿ
ಪೋಷಕರಿಗೆ ಪರೀಕ್ಷಾ ನೋಡಲ್ ಅಧಿಕಾರಿ ನಾಗೇಂದ್ರಪ್ರಸಾದ್ ಸಲಹೆ

ಕೋಲಾರ,ಮಾ.4:ವಿದ್ಯಾರ್ಥಿ ಜೀವನದ ಮೊದಲ ಪಬ್ಲಿಕ್ ಪರೀಕ್ಷೆ ಎದುರಿಸುತ್ತಿರುವ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಭಾವನೆ ಬಲಗೊಳಿಸುವ ಮೂಲಕ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಶಿಕ್ಷಕರು,ಪೋಷಕರು ಮಾಡಬೇಕು ಎಂದು ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ಸಲಹೆ ನೀಡಿದ್ದಾರೆ.
ರಾಜ್ಯಾದ್ಯಂತ ಮಾ.27 ರಿಂದ ಆರಂಭಗೊಳ್ಳುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ವಿದ್ಯಾರ್ಥಿಗಳು ಸಿದ್ದರಾಗಿದ್ದಾರೆ, ಅವರಲ್ಲಿ ಸಕಾರಾತ್ಮಕ ಭಾವನೆ ಬೆಳೆಸಿ, ಮನಸ್ಸಿಗೆ ನೋವಾಗುವ ರೀತಿ ನಿಂದಿಸದಿರಿ ಎಂದು ಸಲಹೆ ನೀಡಿದ್ದಾರೆ.
ಪರೀಕ್ಷೆಗೆ ಕೇವಲ 23 ದಿನ ಬಾಕಿ: ಗುಣಾತ್ಮಕ ಫಲಿತಾಂಶದ ದೃಷ್ಟಿಯಿಂದ ಮತ್ತು ಮಕ್ಕಳಲ್ಲಿನ ಪರೀಕ್ಷಾ ಭಯ ಹೋಗಲಾಡಿಸಲು ಮಕ್ಕಳಲ್ಲಿ ಧೈರ್ಯ ಮತ್ತು ಆತ್ಮವಿಶ್ವಾಸ ತುಂಬಲು ಹಲವಾರು ಸೂಚನೆ,ಸಲಹೆಗಳನ್ನು ನೀಡಿ, ಉಳಿದ 23 ದಿನಗಳಲ್ಲಿ ಪ್ರತಿ ನಿಮಿಷವೂ ಅಮೂಲ್ಯವಾಗಿದ್ದು, ಶ್ರದ್ಧೆಯಿಂದ ಓದಲು ಸಲಹೆ ನೀಡಿದ್ದಾರೆ.
ಪರೀಕ್ಷಾ ಸಾಮಗ್ರಿ ಸಿದ್ದಪಡಿಸಿಕೊಳ್ಳಿ: ಪರೀಕ್ಷೆಗೆ ಅಗತ್ಯವಿರುವ ಪೂರ್ವಸಿದ್ಧತೆ ಮಾಡಿಕೊಳ್ಳಿ ಎಂದು ಸಲಹೆ ನೀಡಿರುವ ಅವರು, ಅಭ್ಯಾಸದ ಸಂದರ್ಭದಲ್ಲಿ ಉಂಟಾಗಬಹುದಾದ ಗೊಂದಲಗಳನ್ನು ಶಿಕ್ಷಕರಿಂದ ಪರಿಹರಿಸಿಕೊಳ್ಳಿ, ಪರೀಕ್ಷೆಗೆ ಅವಶ್ಯವಿರುವ ಕ್ಲಿಪ್‍ಪ್ಯಾಡ್, ಪೆನ್ನುಗಳು,ಜಾಮಿಟ್ರಿ ಬಾಕ್ಸ್ ,ಪೆನ್ಸಿಲ್‍ಗಳು, ಮೆಂಡರ್ ಹಾಗೂ ಅಳಿಸುವರಬ್ಬರ್‍ಗಳನ್ನು ನಾಲ್ಕು ದಿನ ಮುಂಚಿತವಾಗಿಯೇ ಸಿದ್ದಪಡಿಸಿಟ್ಟುಕೊಳ್ಳಿ, ಪರೀಕ್ಷಾ ಪ್ರವೇಶ ಪತ್ರವನ್ನು ಜೋಪಾನವಾಗಿಟ್ಟುಕೊಳ್ಳಿ, ಆಕಸ್ಮಾತ್ ಕಳೆದು ಹೋದಲ್ಲಿ ಗಾಬರಿಯಾಗಬೇಡಿ,ತಮ್ಮ ಶಾಲೆಯ ಮುಖ್ಯಶಿಕ್ಷಕರ ಗಮನಕ್ಕೆ ತಂದು ಮತ್ತೊಂದು ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಬನ್ನಿ: ಪರೀಕ್ಷೆಯ ಹಿಂದಿನ ದಿನವೇ ಸಾದ್ಯವಾದರೆ, ಪರೀಕ್ಷಾ ಕೇಂದ್ರಕ್ಕೆ ತೆರಳಿ ನೋಡಿಕೊಂಡು ಬನ್ನಿ, ಅನಲಾಗ್ ಕೈಗಡಿಯಾರ ಮುಳ್ಳಿನ ಗಡಿಯಾರ ಪರೀಕ್ಷೆಗೆ ಕೊಂಡೊಯ್ಯಬಹುದು, ಪರೀಕ್ಷೆಯ ದಿನ ಬೆಳಗ್ಗೆ 9.00 ಗಂಟೆಯೊಳಗೆ ಪರೀಕ್ಷಾ ಕೆಂದ್ರಕ್ಕೆ ತೆರಳಿ ಯಾವ ಕೊಠಡಿಯಲ್ಲಿ ಆಸನ ವ್ಯವಸ್ಥೆ ಮಾಡಲಾಗಿದೆ.ಎಂಬುದನ್ನು ಖಾತ್ರಿಪಡಿಸಿಕೊಳ್ಳಿ: ಬೆಳಗ್ಗೆ 9.15ಕ್ಕೆ ಮೊದಲ ಘಂಟೆ ಬಾರಿಸಿದೊಡನೆ ನಿಮಗೆ ನಿಗದಿಪಡಿಸಿರುವ ಕೊಠಡಿಯಲ್ಲಿ ನೀವು ಕುಳಿತುಕೊಳ್ಳಬೇಕಾಗಿರುವ ಡೆಸ್ಕ್‍ನಲ್ಲಿ ನಮೂದಾಗಿರುವ ನೋಂದಣಿ ಸಂಖ್ಯೆಯನ್ನು ಹಾಗೂ ನಿಮ್ಮ ಪ್ರವೇಶ ಪತ್ರದಲ್ಲಿನ ನೋಂದಣಿ ಸಂಖ್ಯೆ ಎರಡೂ ಒಂದೇ ಎಂಬುದನ್ನುಖಚಿತಪಡಿಸಿಕೊಳ್ಳಿ. ಆನಂತರ ಆಸೀನರಾಗಿ ಒಂದೆರಡು ನಿಮಿಷ ಕಣ್ಮುಚ್ಚಿ ಧ್ಯಾನ ಮಾಡಿ ನಿಮ್ಮ ಮನಸ್ಸಿನಲ್ಲಿರುವ ಗೊಂದಲಗಳನ್ನು ದೂರ ಮಾಡಿಕೊಂಡು ಏಕಾಗ್ರತೆಯನ್ನು ತಂದುಕೊಳ್ಳಿ ಎಂದು ತಿಳಿಸಿದ್ದಾರೆ.
ಉತ್ತರ ಪುಸ್ತಕದ ಮುಖಪುಟದಲ್ಲಿ ನೊಂದಣಿ ಸಂಖ್ಯೆ, ವಿಷಯ ಹಾಗೂ ಮಾಧ್ಯಮವನ್ನು ಬರೆಯುವುದನ್ನು ಮರೆಯದಿರಿ,ಆದರೆ ಗಣಿತ ವಿಷಯದ ಉತ್ತರ ಪುಸ್ತಕದಲ್ಲಿ ವಿಷಯ ಗಣಿತ ಎಂದು ನಮೂದಾಗಿರುವುದನ್ನು ಗಮನಿಸಿ ಖಾತ್ರಿ ಪಡಿಸಿಕೊಳ್ಳಿ ಎಂದಿದ್ದಾರೆ.







