ಇಂದು ಭಾರತ - ಇಂಗ್ಲೆಂಡ್ ಸೆಮಿ ಫೈನಲ್
ವನಿತೆಯರ ಟ್ವೆಂಟಿ -20 ವಿಶ್ವಕಪ್

ಸಿಡ್ನಿ, ಮಾ.4: ಗ್ರೂಪ್ ಹಂತದಲ್ಲಿ ಅಜೇಯ ಗೆಲುವಿನ ಓಟದೊಂದಿಗೆ ನಾಕೌಟ್ ಹಂತ ತಲುಪಿರುವ ಭಾರತದ ವನಿತೆಯರ ಕ್ರಿಕೆಟ್ ತಂಡ ಗುರುವಾರ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.
ಭಾರತದ ವನಿತೆಯರ ತಂಡ ಟ್ವೆಂಟಿ-20 ವಿಶ್ವಕಪ್‌ನ ಇತಿಹಾಸದಲ್ಲಿ ಮೊದಲ ಬಾರಿ ಫೈನಲ್ ಪ್ರವೇಶಿಸಲು ಎದುರು ನೋಡುತ್ತಿದೆ. ವಿಶ್ವಕಪ್‌ನ ಈ ವರೆಗಿನ ಏಳು ಆವೃತ್ತಿಗಳಲ್ಲಿ ಭಾರತ ಈ ತನಕ ಒಮ್ಮೆಯೂ ಫೈನಲ್ ತಲುಪಿಲ್ಲ. ಈ ಬಾರಿ ಅತ್ಯುತ್ತಮ ಫಾರ್ಮ್‌ನಲ್ಲಿರುವ ಭಾರತಕ್ಕೆ ಫೈನಲ್ ತಲುಪಲು ಇನ್ನೊಂದು ಮೆಟ್ಟಿಲು ಏರಬೇಕಾಗಿದೆ.
ಭಾರತದ ವನಿತೆಯರ ತಂಡ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯದ ವಿರುದ್ಧ ಗೆಲುವಿನೊಂದಿಗೆ ಅಭಿಯಾನ ಆರಂಭಿಸಿತ್ತು. ಆನಂತರ ಬಾಂಗ್ಲಾದೇಶ, ನ್ಯೂಝಿಲ್ಯಾಂಡ್ ಮತ್ತು ಶ್ರೀಲಂಕಾ ವಿರುದ್ಧ ಗೆಲುವು ದಾಖಲಿಸಿ ‘ಎ’ ಗುಂಪಿನಲ್ಲಿ 4 ಪಂದ್ಯಗಳಲ್ಲಿ 8 ಅಂಕಗಳೊಂದಿಗೆ ಸೆಮಿಫೈನಲ್‌ನಲ್ಲಿ ಅವಕಾಶ ದೃಢಪಡಿಸಿತ್ತು.
ಭಾರತ ಅತ್ಯುತ್ತಮ ಫಾರ್ಮ್‌ನಲ್ಲಿದೆ. ಇಂಗ್ಲೆಂಡ್ ‘ಬಿ’ ಗುಂಪಿನ ಪಂದ್ಯದಲ್ಲಿ ಆಡಿರುವ ನಾಲ್ಕು ಪಂದ್ಯಗಳ ಪೈಕಿ 3ರಲ್ಲಿ ಜಯ ಗಳಿಸಿ ಸೆಮಿಫೈನಲ್ ತಲುಪಿತ್ತು. ವೆಸ್ಟ್‌ಇಂಡೀಸ್‌ನಲ್ಲಿ ನಡೆದಿದ್ದ ಕಳೆದ ಆವೃತ್ತಿಯ ಟ್ವೆಂಟಿ-20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್ 8 ವಿಕೆಟ್‌ಗಳ ಜಯ ಗಳಿಸಿತ್ತು.
ಇದಕ್ಕೂ ಮೊದಲು, ಭಾರತವು 2009, 2012, 2014 ಮತ್ತು 2016 ಆವೃತ್ತಿಗಳಲ್ಲಿ ಗ್ರೂಪ್ ಹಂತದಲ್ಲೇ ಸೋಲು ಅನುಭವಿಸಿತ್ತು. ‘‘ಕೊನೆಯ ಸೆಮಿಫೈನಲ್‌ನ್ನು ಕಳೆದುಕೊಂಡ ನಂತರ ನಾವು ಸಂಘಟಿತವಾಗಿ ಕೆಲಸ ಮಾಡಬೇಕೆಂದು ಅರಿತುಕೊಂಡೆವು. ಇದೀಗ ತಂಡದ ಎಲ್ಲರ ನೆರವಿನಲ್ಲಿ ಭಾರತ ಯಶಸ್ಸು ಗಳಿಸಿದೆ. ಕೇವಲ ಒಬ್ಬರು ಅಥವಾ ಇಬ್ಬರು ಆಟಗಾರ್ತಿಯರನ್ನು ನಮ್ಮ ತಂಡ ಅವಲಂಬಿಸಿಲ್ಲ’’ ಎಂದು ಭಾರತದ ನಾಯಕಿ ಹರ್ಮನ್ ಪ್ರೀತ್ ಕೌರ್ ಹೇಳಿದ್ದಾರೆ.
2018ರಲ್ಲಿ ಸೆಮಿಫೈನಲ್‌ನಲ್ಲಿ ಸೋಲು : ಇದೀಗ ತಂಡದಲ್ಲಿರುವ ಏಳು ಆಟಗಾರ್ತಿಯರು ಈ ಹಿಂದೆ ಸೆಮಿಫೈನಲ್‌ನಲ್ಲಿ ಆಡಿದ್ದಾರೆ ಮತ್ತು ಇದೀಗ ಅವರು ಇಂಗ್ಲೆಂಡ್ ವನಿತೆಯರಿಗೆ ಸೋಲುಣಿಸಲು ಎದುರು ನೋಡುತ್ತಿದ್ದಾರೆ.
ಈ ವಿಶ್ವಕಪ್‌ಗೆ ಮುನ್ನ ಆಸ್ಟ್ರೇಲಿಯದಲ್ಲಿ ನಡೆದ ತ್ರಿಕೋನ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧದ ಗೆಲುವಿನೊಂದಿಗೆ ಭಾರತದ ಆಟಗಾರ್ತಿಯರು ಆತ್ಮವಿಶ್ವಾಸವನ್ನು ಹೆಚಿಸ್ಚಿಕೊಂಡಿದ್ದರು. ಅದರಲ್ಲೂ ಮುಖ್ಯವಾಗಿ ಯುವ ಆಟಗಾರ್ತಿಯರು ತಂಡದ ಯಶಸ್ಸಿಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಶೆಫಾಲಿ ವರ್ಮಾ ಟೂರ್ನಿಯಲ್ಲಿ ಒಟ್ಟು 161 ರನ್ ಗಳಿಸಿ ಪ್ರಮುಖ ಬ್ಯಾಟ್ಸ್‌ವುಮೆನ್ ಎನಿಸಿಕೊಂಡಿದ್ದಾರೆ.
16ರ ಹರೆಯದ ಶೆಫಾಲಿ 40.25ರ ಬ್ಯಾಟಿಂಗ್ ಸರಾಸರಿಯಲ್ಲಿ ಟೂರ್ನಿಯಲ್ಲಿ ಗರಿಷ್ಠ ರನ್ ಗಳಿಸುವವರಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್‌ನ ನಥಾಲಿಯಾ ಸೈವರ್ (202)ಮೊದಲನೇ ಮತ್ತು ಹೀದರ್ ನೈಟ್ (193) ಎರಡನೇ ಸ್ಥಾನದಲ್ಲಿದ್ದಾರೆ. ಒನ್-ಡೌನ್ ಜೆಮಿಮಾ ರೋಡ್ರಿಗಸ್ ಸಹ ಉತ್ತಮ ಫಾರ್ಮ್‌ನಲ್ಲಿದ್ದಾರೆ ಮತ್ತು ಇದುವರೆಗೆ ದೊಡ್ಡ ಸ್ಕೋರ್ ಗಳಿಸದಿದ್ದರೂ ಉಪಯುಕ್ತ ಕೊಡುಗೆಗಳನ್ನು ನೀಡಿದ್ದಾರೆ,
ವೇದಾ ಕೃಷ್ಣಮೂರ್ತಿ, ಶಿಖಾ ಪಾಂಡೆ ಮತ್ತು ರಾಧಾ ಯಾದವ್ ಅಗತ್ಯವಿರುವಾಗ ಮಧ್ಯಮ ಕ್ರಮಾಂಕದಲ್ಲಿ ಉಪಯುಕ್ತ ಕೊಡುಗೆ ನೀಡಿದ್ದಾರೆ. ಅನುಭವಿ ಆಟಗಾರ್ತಿ, ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಓಪನರ್ ಸ್ಮತಿ ಮಂಧಾನ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಸೆಮಿಫೈನಲ್‌ನಲ್ಲಿ ಅವರಿಂದ ದೊಡ್ಡ ಕೊಡುಗೆ ನಿರೀಕ್ಷಿಸಲಾಗಿದೆ.
ಬೌಲಿಂಗ್ ವಿಭಾಗದಲ್ಲಿ, ಲೆಗ್ ಸ್ಪಿನ್ನರ್ ಪೂನಮ್ ಯಾದವ್ ನಾಲ್ಕು ಪಂದ್ಯಗಳಿಂದ ಒಂಬತ್ತು ವಿಕೆಟ್ ಗಳಿಸಿ ಟೂರ್ನಮೆಂಟ್‌ನಲ್ಲಿ ಗರಿಷ್ಠ ವಿಕೆಟ್ ಪಡೆದವರ ಪೈಕಿ ಅಗ್ರ ಸ್ಥಾನದಲ್ಲಿದ್ದಾರೆ. ಅವರಿಗೆ ಶಿಖಾ ಪಾಂಡೆ (4 ಪಂದ್ಯಗಳಿಂದ 7 ವಿಕೆಟ್ ) ಉತ್ತಮ ಬೆಂಬಲ ನೀಡಿದ್ದಾರೆ.
ಇಂಗ್ಲೆಂಡ್ 4 ಪಂದ್ಯಗಳಲ್ಲಿ ಒಂದು ಸೋಲಿನೊಂದಿಗೆ ‘ಬಿ ’ ಗುಂಪಿನಲ್ಲಿ ಎರಡನೇ ಸ್ಥಾನ ಗಳಿಸಿದ ನಂತರ ಸೆಮಿಫೈನಲ್‌ಗೆ ಅರ್ಹತೆ ಪಡೆದಿದೆ. ಇಂಗ್ಲೆಂಡ್‌ನ ಬ್ಯಾಟಿಂಗ್‌ನಲ್ಲಿ ನಥಾಲಿಯಾ ಮೂರು ಅರ್ಧಶತಕಗಳನ್ನು ಒಳಗೊಂಡ 67.33 ಸರಾಸರಿಯಲ್ಲಿ 202 ರನ್‌ಗಳನ್ನು ಗಳಿಸಿದ್ದಾರೆ. ಬೌಲಿಂಗ್ ವಿಭಾಗದಲ್ಲೂ ಇಂಗ್ಲೆಂಡ್ ಎಡಗೈ ಸ್ಪಿನ್ನರ್ ಸೋಫಿ ಎಕ್ಲೆಸ್ಟೋನ್ (8 ವಿಕೆಟ್) ಮತ್ತು ವೇಗಿ ಅನ್ಯಾ ಅವರನ್ನು ಒಳಗೊಂಡಿದೆ.
ಟೂರ್ನಮೆಂಟ್‌ನಲ್ಲಿ ಗರಿಷ್ಠ ವಿಕೆಟ್ ಪಡೆದವರ ಪಟ್ಟಿಯಲ್ಲಿ ಎಡಗೈ ಸ್ಪಿನ್ನರ್ ಸೋಫಿ ಎಕ್ಲೆಸ್ಟೋನ್ (8 ವಿಕೆಟ್) ಎರಡನೇ ಮತ್ತು ಶ್ರಬ್ಸೋಲ್ (7 ವಿಕೆಟ್)ಮೂರನೇ ಸ್ಥಾನದಲ್ಲಿದ್ದಾರೆ.
ಪಂದ್ಯ ಆರಂಭದ ಸಮಯ ಬೆಳಗ್ಗೆ 9:30







