ರಣಜಿ: ಸತತ ಎರಡನೇ ಬಾರಿ ಫೈನಲ್‌ಗೆ ಪ್ರವೇಶಿಸಿದ ಸೌರಾಷ್ಟ್ರ
ಉನದ್ಕಟ್ ಅಮೋಘ ಬೌಲಿಂಗ್‌ಗೆ ಗುಜರಾತ್ ತತ್ತರ

ರಾಜ್‌ಕೋಟ್,ಮಾ.4: ಮೊದಲ ಸೆಮಿ ಫೈನಲ್ ಪಂದ್ಯದ ಐದನೇ ಹಾಗೂ ಕೊನೆಯ ದಿನವಾದ ಬುಧವಾರ ಗುಜರಾತ್ ತಂಡವನ್ನು 92 ರನ್‌ಗಳ ಅಂತರದಿಂದ ಮಣಿಸಿದ ಸೌರಾಷ್ಟ್ರ ತಂಡ ಸತತ ಎರಡನೇ ಬಾರಿ ರಣಜಿ ಟ್ರೋಫಿಯಲ್ಲಿ ಫೈನಲ್ ಪ್ರವೇಶಿಸಿದೆ.
ಸೌರಾಷ್ಟ್ರದ ನಾಯಕ ಹಾಗೂ ಪ್ರಮುಖ ವೇಗದ ಬೌಲರ್ ಜೈದೇವ್ ಉನದ್ಕಟ್ ಏಳು ವಿಕೆಟ್ ಗೊಂಚಲು ಕಬಳಿಸಿ ತಂಡವನ್ನು ಮುಂಚೂಣಿಯಲ್ಲಿ ನಿಂತು ಮುನ್ನಡೆಸಿದರು. ಉನದ್ಕಟ್ ಉರಿ ಬೌಲಿಂಗ್ ದಾಳಿಯ ಮುಖಾಂತರ ಗುಜರಾತ್ ತಂಡವನ್ನು ಎರಡನೇ ಇನಿಂಗ್ಸ್‌ನಲ್ಲಿ 234 ರನ್‌ಗೆ ನಿಯಂತ್ರಿಸಲು ನೆರವಾದರು.
ಗೆಲ್ಲಲು 327 ರನ್ ಗುರಿ ಪಡೆದಿದ್ದ ಗುಜರಾತ್ ಒಂದು ವಿಕೆಟ್ ನಷ್ಟಕ್ಕೆ 7 ರನ್‌ನಿಂದ ಎರಡನೇ ಇನಿಂಗ್ಸ್ ಆರಂಭಿಸಿತು. ಒಂದು ಹಂತದಲ್ಲಿ 63 ರನ್‌ಗೆ ಐದು ವಿಕೆಟ್ ಕಳೆದುಕೊಂಡಿದ್ದ ಗುಜರಾತ್ ತಂಡಕ್ಕೆ ನಾಯಕ ಪಾರ್ಥಿವ ಪಟೇಲ್(93, 148 ಎಸೆತ, 13 ಬೌಂಡರಿ) ಹಾಗೂ ಚಿರಾಗ್ ಗಾಂಧಿ(96, 139 ಎಸೆತ, 16 ಬೌಂಡರಿ)ಆಸರೆಯಾದರು. ಈ ಜೋಡಿ ಆರನೇ ವಿಕೆಟ್‌ಗೆ 158 ರನ್ ಸೇರಿಸಿ ಗುಜರಾತ್‌ಗೆ ಅಮೋಘ ಜಯ ತಂದುಕೊಡುವ ವಿಶ್ವಾಸ ಮೂಡಿಸಿದರು. ಆದರೆ, ಉನದ್ಕಟ್ ಶತಕದತ್ತ ಮುಖ ಮಾಡಿದ್ದ ಪಟೇಲ್ ಹಾಗೂ ಗಾಂಧಿ ಅವರನ್ನು ಪೆವಿಲಿಯನ್‌ಗೆ ಅಟ್ಟುವುದರೊಂದಿಗೆ ತನ್ನ ತಂಡಕ್ಕೆ ಸ್ಮರಣೀಯ ಗೆಲುವು ತಂದರು.
ಸೌರಾಷ್ಟ್ರ ತಂಡ ಮಾರ್ಚ್ 9ರಂದು ರಾಜ್‌ಕೋಟ್‌ನಲ್ಲೇ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಬಂಗಾಳವನ್ನು ಎದುರಿಸಲಿದೆ. ಕಳೆದ ವರ್ಷ ಕೂಡ ಫೈನಲ್ ತಲುಪಿದ್ದ ಸೌರಾಷ್ಟ್ರ ತಂಡ ವಿದರ್ಭ ತಂಡದ ವಿರುದ್ಧ ಸೋಲುಂಡಿತ್ತು. 1 ವಿಕೆಟ್ ನಷ್ಟಕ್ಕೆ 7 ರನ್‌ನಿಂದ ಬ್ಯಾಟಿಂಗ್ ಆರಂಭಿಸಿದ ಗುಜರಾತ್ 7 ರನ್‌ಗೆ ಮತ್ತೊಂದು ವಿಕೆಟ್ ಕಳೆದುಕೊಂಡಿತು. ಧುೃವ ರಾವಲ್(1) ರಿಟರ್ನ್ ಕ್ಯಾಚ್ ಪಡೆದ ಉನದ್ಕಟ್ ಗುಜರಾತ್‌ಗೆ ಆ
ಘಾತ ನೀಡಿದರು. ಮೊದಲ ಇನಿಂಗ್ಸ್‌ನಲ್ಲಿ ಮಿಂಚಿದ್ದ ರುಜುಲ್ ಭಟ್(1)ಔಟಾದ ಬೆನ್ನಿಗೇ ಗುಜರಾತ್ 63 ರನ್‌ಗೆ ಐದನೇ ವಿಕೆಟ್ ಕಳೆದುಕೊಂಡಿತು. ಆಗ ಜೊತೆಯಾದ ಪಾರ್ಥಿವ್ ಹಾಗೂ ಚಿರಾಗ್ ಗಾಂಧಿ ತಂಡವನ್ನು ಆಧರಿಸಿದರು. ಈ ಇಬ್ಬರ ಸಾಹಸದಿಂದ ಟೀ ವಿರಾಮದ ವೇಳೆಗೆ ಗುಜರಾತ್ 5 ವಿಕೆಟ್‌ಗೆ 206 ರನ್ ಗಳಿಸಿತ್ತು. ಗೆಲ್ಲಲು ಕೊನೆಯ ಅವಧಿಯಲ್ಲಿ 121 ರನ್ ಅವಶ್ಯಕತೆ ಇತ್ತು. ಒಂದೇ ಓವರ್‌ನಲ್ಲಿ ಪಾರ್ಥಿವ್ ಹಾಗೂ ಹೊಸ ಬ್ಯಾಟ್ಸ್‌ಮನ್ ಅಕ್ಷರ್ ಪಟೇಲ್(0)ವಿಕೆಟನ್ನು ಪಡೆದ ಉನದ್ಕಟ್ ಪಂದ್ಯ ಸೌರಾಷ್ಟ್ರದತ್ತ ವಾಲುವಂತೆ ಮಾಡಿದರು. ಉನದ್ಕಟ್ ರಿಟರ್ನ್ ಕ್ಯಾಚ್ ಪಡೆದು ಅಕ್ಷರ್ ವಿಕೆಟ್ ಪಡೆದರು. ಈ ಎರಡು ವಿಕೆಟ್ ಉರುಳಿಸಿದ ಉನದ್ಕಟ್ 20ನೇ ಬಾರಿ ಐದು ವಿಕೆಟ್ ಗೊಂಚಲು ಕಬಳಿಸಿದರು. ಸೌರಾಷ್ಟ್ರ ತಂಡ ಗುಜರಾತ್‌ನ ಕೆಳ ಕ್ರಮಾಂಕದ ಆಟಗಾರರನ್ನು ಬೇಗನೆ ಔಟ್ ಮಾಡಿತು. ಕೊನೆಯ ವಿಕೆಟ್ ಪಡೆದ ಉನದ್ಕಟ್ ಗುಜರಾತ್ ೋರಾಟಕ್ಕೆ ತೆರೆ ಎಳೆದರು.
ಸಂಕ್ಷಿಪ್ತ ಸ್ಕೋರ್
► ಸೌರಾಷ್ಟ್ರ ಮೊದಲ ಇನಿಂಗ್ಸ್: 304 ಸೌರಾಷ್ಟ್ರ ಎರಡನೇ ಇನಿಂಗ್ಸ್:274
► ಗುಜರಾತ್ ಮೊದಲ ಇನಿಂಗ್ಸ್: 252
► ಗುಜರಾತ್ ಎರಡನೇ ಇನಿಂಗ್ಸ್: 234
(ಚಿರಾಗ್ ಗಾಂಧಿ 96, ಪಾರ್ಥಿವ್ ಪಟೇಲ್ 93, ಜೈದೇವ್ ಉನದ್ಕಟ್ 7-56)
► ಪಂದ್ಯಶ್ರೇಷ್ಠ: ಅರ್ಪಿತ್ ವಸವಡ







