ಸರ್ಕಾರಿ ಶಾಲೆಗಳಲ್ಲಿ ಓದಿದವರೇ ಮಹಾನ್ ಸಾಧಕರು: ಶಿಕ್ಷಣ ಇಲಾಖೆ ಉಪನಿರ್ದೇಶಕ ರತ್ನಯ್ಯ
ಪ್ರೊಬೆಷನರಿ ತಹಶೀಲ್ದಾರ್ ಮುನಿಸ್ವಾಮಿರೆಡ್ಡಿಗೆ ಸನ್ಮಾನ

ಕೋಲಾರ, ಮಾ.4: ಸರ್ಕಾರಿ ಶಾಲೆಯಲ್ಲಿ ಓದಿದವರೇ ಇಂದು ದೇಶದ ಮಹಾನ್ ಸಾಧಿಕರಾಗಿದ್ದಾರೆ ಎಂಬುದನ್ನು ಅರಿತು ಪೋಷಕರು ಕಾನ್ವೆಂಟ್ ಮೋಹದಿಂದ ಹೊರಬರಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ರತ್ನಯ್ಯ ಕರೆ ನೀಡಿದರು.
ನಗರದ ಡಿಡಿಪಿಐ ಕಚೇರಿಯಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಖಾಜಿಕಲ್ಲಹಳ್ಳಿ ಸರ್ಕಾರಿ ಶಾಲೆಯಲ್ಲಿ ಓದಿ ಇದೀಗ ಕೆಎಎಸ್.ಮುಗಿಸಿ ಪ್ರೊಬೆಷನರಿ ತಹಸೀಲ್ದಾರ್ ಆಗಿ ನೇಮಕಗೊಂಡಿರುವ ಮುನಿಸ್ವಾಮಿರೆಡ್ಡಿರನ್ನು ಸನ್ಮಾನಿಸಿ ಅವರು ಮಾತನಾಡುತ್ತಿದ್ದರು.
ಮುನಿಸ್ವಾಮಿರೆಡ್ಡಿಯವರು ತಮ್ಮ ಪ್ರಾಥಮಿಕ,ಪ್ರೌಢಶಾಲಾ ಶಿಕ್ಷಣವನ್ನು ಸರ್ಕಾರಿ ಶಾಲೆಯಲ್ಲೇ ಮುಗಿಸಿದ್ದಾರೆ, ಅವರಿಂದ ಕೆಎಎಸ್ ಪರೀಕ್ಷೆ ಉತ್ತೀರ್ಣರಾಗಿ ತಹಶೀಲ್ದಾರ್ ಆಗಿದ್ದಾರೆ ಇದು ನಮ್ಮ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕು ಎಂದು ಅಭಿಪ್ರಾಯಪಟ್ಟರು.
ಕಾನ್ವೆಂಟ್ ವ್ಯಾಮೋಹದಿಂದಾಗಿ ಇಂದು ಸರ್ಕಾರಿ ಶಾಲೆಗಳ ದಾಖಲಾತಿ ಕುಸಿತ ವಿಷಾದಕರ ಎಂದ ಅವರು, ಮುನಿಸ್ವಾಮಿರೆಡ್ಡಿಯವರಂತಹ ಸಾಧಕರನ್ನು ನೋಡಿಯಾದರೂ ಪೋಷಕರು ತಮ್ಮ ಮನೋಭಾವ ಬದಲಿಸಬೇಕು ಎಂದು ಕೋರಿದರು.
ಸರ್ಕಾರಿ ಶಾಲೆಗಳಲ್ಲೇ ಗುಣಮಟ್ಟದ ಶಿಕ್ಷಣ ಸಿಗುತ್ತಿರುವುದು, ಅಲ್ಲೇ ನುರಿತ ಹಾಗೂ ಸ್ವರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆ ಮಾಡಿ ಬಂದ ಶಿಕ್ಷಕರು ಇರುವುದು ಎಂಬುದನ್ನು ಪೋಷಕರು ಅರಿಯಬೇಕು, ಕೇವಲ ಖಾಸಗಿ ವ್ಯಾಮೋಹದಿಂದ ಹೊರಬರಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ, ನಮ್ಮೂರಿನ ಸರ್ಕಾರಿ ಶಾಲೆಯಲ್ಲಿ ಓದಿದ ಅವರ ಈ ಸಾಧನೆ ನಮಗೆ ಹೆಮ್ಮೆ ಎನಿಸುತ್ತಿದೆ, ಇಂತಹವರು ಸರ್ಕಾರಿ ಶಾಲೆಗಳಿಗೆ ಆಗಾಗ ಬಂದು ಮಕ್ಕಳಿಗೆ ಪ್ರೇರಣೆಯ ಮಾತುಗಳನ್ನಾಡಿದರೆ ಹೆಚ್ಚು ಅನುಕೂಲವಾಗುತ್ತದೆ ಎಂದು ಕೋರಿದರು.
ಮುನಿಸ್ವಾಮಿರೆಡ್ಡಿ ಇದೀಗ ತಾಲ್ಲೂಕೊಂದರ ಕಂದಾಯ ಇಲಾಖೆಯ ಧಣಿಯಾಗಲಿದ್ದಾರೆ, ಅವರು ಸಾಧನೆ ಮಾಡಲು ಸರ್ಕಾರಿ ಶಾಲೆಯೇ ದಾರಿಯಾಗಿದೆ, ಇದನ್ನು ಪೋಷಕರು ಗಮನಿಸಬೇಕು ಎಂದರು.
ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್, ಸಾಧನೆಗೆ ಬಡತನ, ಗ್ರಾಮೀಣ ವಾತಾವರಣ ಎಂದಿಗೂ ಅಡ್ಡಿಯಲ್ಲ, ಶ್ರದ್ಧೆ, ಛಲ ಇದ್ದರೆ ಎಲ್ಲಿದ್ದರೂ ಗುರಿ ತಲುಪಲು ಸಾಧ್ಯ ಎಂಬುದನ್ನು ಮುನಿಸ್ವಾಮಿರೆಡ್ಡಿ ಸಾಕ್ಷೀಕರಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮಾಲೂರು ಕ್ಷೇತ್ರ ಶಿಕ್ಷಣಾಧಿಕಾರಿ ಮಾಧವರೆಡ್ಡಿ, ವಿಷಯ ಪರಿವೀಕ್ಷಕರಾದ ಕೃಷ್ಣಪ್ಪ, ಬಿ.ವೆಂಕಟೇಶಪ್ಪ, ಇಸಿಒಗಳಾದ ಆರ್.ಶ್ರೀನಿವಾಸನ್, ರಾಘವೇಂದ್ರ, ಇಲಾಖೆಯ ವೇಣು ಮತ್ತಿತರರು ಹಾಜರಿದ್ದು, ಶುಭ ಕೋರಿದರು.







