ಬೀಡಿ ಕಾರ್ಮಿಕರಿಗೆ ಸಾವಿರ ಬೀಡಿಗೆ ರೂ.13.92 ಹೆಚ್ಚಳ: ಬಿ.ಎಂ.ಭಟ್
ಪುತ್ತೂರು, ಮಾ. 4: ಬೆಲೆ ಏರಿಕೆಗನುಗುಣವಾಗಿ ಏರಿಕೆಯಾಗುವ ತುಟ್ಟೀಬತ್ತೆ ಗ್ರಾಹಂಕ ಸೂಚ್ಯಾಂಕ ದರ 328 ಅಂಶ ಹೆಚ್ಚಳವಾಗಿದ್ದು ಬೀಡಿ ಕಾರ್ಮಿಕರಿಗೆ ದರ 4 ಪೈಸೆಯಂತೆ ರೂ. 13.92 ವೇತನ ಏರಿಕೆಯಾಗಿದ್ದು ಈ ಏರಿಕೆ ಎ.1ರಿಂದ ಜಾರಿಯಾಗಲಿದೆ ಹಾಗೂ ಆ ಮೂಲಕ ಬೀಡಿ ಕಾರ್ಮಿಕರಿಗೆ ವೇತನ ಪ್ರತಿ 1000 ಬೀಡಿಗೆ ರೂ. 240.92 ರಷ್ಟು ಆಗಲಿದೆ ಎಂದು ದ.ಕ. ಜಿಲ್ಲಾ ಬೀಡಿ ಕಾರ್ಮಿಕರ ಹಿತ ರಕ್ಷಣಾ ವೇದಿಕೆಯ ಅದ್ಯಕ್ಷ, ಪುತ್ತೂರು ತಾಲೂಕು ಬೀಡಿ ಕೆಲಸಗಾರ ಸಂಘದ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಬಿ.ಎಂ.ಭಟ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಾಲಕರು ಸರಕಾರ ನಿಗಿದಿಗೊಳಿಸಿದ ಕನಿಷ್ಟ ಕೂಲಿಯನ್ನೇ ನೀಡದೆ ವಂಚಿಸುತ್ತಿದ್ದರೂ ಸರಕಾರ ಬೀಡಿ ಕಾರ್ಮಿಕರ ನೆರವಿಗೆ ಬರುತ್ತಿಲ್ಲ. ಕನಿಷ್ಟ ಕೂಲಿಯನ್ನೇ ನೀಡದ ಮಾಲಕರ ಮೇಲೆ ಏನೂ ಮಾಡಲಾಗದೆ ಮೌನದಿಂದಿರುವ ಸರಕಾರ ಈ ತುಟ್ಟೀ ಭತ್ತೆಯನ್ನೂ ಕೊಡಿಸದೇ ಇದ್ದರೆ ತೀವ್ರ ಸ್ವರೂಪದ ಹೊರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಸಾವಿರಾರು ಕಾರ್ಮಿಕರನ್ನು ಹೊಂದಿರುವ ದೇಸಾಯಿ ಬೀಡಿ ಸಂಸ್ಥೆ ಕೈಗಾರಿಕೆಯನ್ನೇ ಮುಚ್ಚುತ್ತಿದ್ದರೂ ಸರಕಾರ ಕಾರ್ಮಿಕರಿಗೆ ಸಿಗಬೇಕಾದ ಕ್ಲೋಸರ್ ವೇತನ, ಗ್ರಾಚ್ಯುವಿಟಿ, ಪರಿಹಾರಧನ ಮೊದಲಾದ ಸವಲತ್ತು ಕೊಡಿಸಿಲ್ಲ. ಮಾತ್ರವಲ್ಲ ಸರಕಾರದ ಅನುಮತಿಯನ್ನೇ ಪಡೆಯದೆ ಕಂಪೆನಿ ಮುಚ್ಚಲು ನಿರ್ಧರಿಸಿ ಕಾರ್ಮಿಕರಿಗೆ ಕೆಲಸ ನೀಡದೆ ವಂಚಿಸುತ್ತಿರುವುದು ಈ ದೇಶದ ಕಾನೂನಿಗೆ ಎಸೆದ ದೊಡ್ಡ ಸವಾಲಾಗಿದೆ. ಇನ್ನು ಹಲವು ಕಂಪೆನಿಗಳು ಬೀಡಿ ಕಾರ್ಮಿಕರಿಗೆ ಗ್ರಾಚ್ಯುವಿಟಿ ನೀಡದೆ ವಂಚನೆ ಮಾಡುತ್ತಿವೆ. ಈ ಎಲ್ಲಾ ಸಮಸ್ಯೆಗಳ ವಿರುದ್ದ ಮಾರ್ಚು 17 ರಂದು ಜಿಲ್ಲಾ ಮಟ್ಟದ ಭೃಹತ್ ಪ್ರತಿಭಟನಾ ಸಮಾವೇಶ ನಡೆಸಲು ದ.ಕ. ಜಿಲ್ಲಾ ಬೀಡಿ ಕಾರ್ಮಿಕರ ಹಿತ ರಕ್ಷಣಾ ವೇದಿಕೆ ನಿರ್ಧರಿಸಿದೆ ಎಂದು ಬಿ.ಎಂ.ಭಟ್ ಅವರು ತಿಳಸಿಸಿದ್ದಾರೆ.
ಬೀಡಿ ಕೆಲಸ ಬಿಟ್ಟ ಕಾರ್ಮಿಕರಿಗೆ ಗ್ರಾಚ್ಯುವಿಟಿ ಅರ್ಜಿ ಸಲ್ಲಿಸಲು ಹಾಗೂ ಈಗ ಏರಿಕೆ ಆದ ವೇತನ ಹಾಗೂ ಪ್ರತಿಯೊಬ್ಬ ಬೀಡಿ ಕಾರ್ಮಿಕರಿಗೆ 2 ವರ್ಷದಿಂದ ಕಟ್ಟಿದ ಬೀಡಿಗಳಿಗೆ ಸಿಗಲು ಬಾಕಿ ಇರುವ ವೇತನ ಲಕ್ಷ ಬೀಡಿಗೆ ರೂ 4,000 ದಂತೆ ಹಾಗೂ ಡಿ.ಎ. ರೂ. 11,934-00 ಗಳನ್ನು ಪಡೆಯಲು ಸಿದ್ದರಾಗಬೇಕೆಂದು ಅವರು ತಿಳಿಸಿದ್ದಾರೆ.







