ಅಮೆರಿಕ ಅಧ್ಯಕ್ಷೀಯ ಚುನಾವಣೆ ಪ್ರಚಾರದಿಂದ ಹಿಂದೆ ಸರಿದ ಬ್ಲೂಮ್‌ಬರ್ಗ್

ವಾಷಿಂಗ್ಟನ್, ಮಾ.5: ಅಮೆರಿಕ ಮಾಧ್ಯಮ ದೊರೆ ಮತ್ತು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಮೈಕೆಲ್ ಬ್ಲೂಮ್‌ಬರ್ಗ್ ಅಧ್ಯಕ್ಷೀಯ ಅಭ್ಯರ್ಥಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಕೋಟ್ಯಂತರ ಡಾಲರ್ ವೆಚ್ಚದ ಅದ್ದೂರಿ ಪ್ರಚಾರ ನಡೆಸಿದರೂ ‘ಸೂಪರ್ ಮಂಗಳವಾರ’ ಮತದಾರರಿಂದ ತಿರಸ್ಕರಿಸಲ್ಪಟ್ಟ ಬೆನ್ನಲ್ಲೇ ಈ ನಿರ್ಧಾರ ಪ್ರಕಟಿಸಿದ್ದಾರೆ.
"ಮೂರು ತಿಂಗಳು ಮುನ್ನ ಡೊನಾಲ್ಡ್ ಟ್ರಂಪ್ ಅವರನ್ನು ಸೋಲಿಸುವ ಸಲುವಾಗಿ ಅಧ್ಯಕ್ಷೀಯ ಸ್ಪರ್ಧೆಗೆ ಧುಮುಕಿದ್ದೆ. ಇಂದು ಡೊನಾಲ್ಡ್ ಟ್ರಂಪ್ ಅವರನ್ನು ಸೋಲಿಸುವ ಉದ್ದೇಶದಿಂದಲೇ ಸ್ಪರ್ಧೆಯಿಂದ ಹಿಂದೆ ಸರಿಯುತ್ತಿದ್ದೇನೆ. ನಾನು ಸ್ಪರ್ಧೆಯಲ್ಲಿ ಮುಂದುವರಿದರೆ ಗುರಿ ತಲುಪುವುದು ಕಷ್ಟಸಾಧ್ಯ ಎನ್ನುವುದು ಸ್ಪಷ್ಟವಾಗಿದೆ" ಎಂದು ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಕೋಟ್ಯಧಿಪತಿ ಮತ್ತು ನ್ಯೂಯಾರ್ಕ್‌ನ ಮಾಜಿ ಮೇಯರ್ ಆಗಿರುವ ಬ್ಲೂಮ್‌ಬರ್ಗ್, 500 ದಶಲಕ್ಷ ಡಾಲರ್‌ಗಳನ್ನು ತಮ್ಮ ಅಧ್ಯಕ್ಷೀಯ ರೇಸ್ ಪ್ರಚಾರಕ್ಕಾಗಿ ವ್ಯಯಿಸಿದ್ದರು. ಆದರೆ ಸೂಪರ್ ಮಂಗಳವಾರ ಲಭ್ಯವಿದ್ದ 14 ಸ್ಥಾನಗಳ ಪೈಕಿ ಒಂದನ್ನೂ ಗೆಲ್ಲಲು ವಿಫಲರಾದರು.





