ರಾಜ್ಯ ಬಜೆಟ್ 2020-21: ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಲಭಿಸಿದ್ದೇನು? ಇಲ್ಲಿದೆ ಸಂಪೂರ್ಣ ವಿವರ

ಬೆಂಗಳೂರು, ಮಾ.5: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ಮಂಡಿಸಿದ ರಾಜ್ಯ ಬಜೆಟ್ 2020-21ರಲ್ಲಿ ಶಿಕ್ಷಣ, ಆರೋಗ್ಯ ಕ್ಷೇತ್ರಗಳ ಅಭಿವೃದ್ಧಿಗೆ ಸಂಬಂಧಿಸಿ ಹಲವು ಯೋಜನೆಗಳನ್ನು ಘೋಷಿಸಿದ್ದಾರೆ. ಅವುಗಳ ವಿವರ ಇಂತಿವೆ.
►ಒಂದೇ ಸೂರಿನಡಿ ಪೂರ್ವ ಪ್ರಾಥಮಿಕ ತರಗತಿಗಳಿಂದ ಪದವಿ ಪೂರ್ವ ತರಗತಿವರೆಗೆ ಶಿಕ್ಷಣ ನೀಡುವ 276 ಕರ್ನಾಟಕ ಪಬ್ಲಿಕ್ ಶಾಲೆಗಳ ಮೂಲಭೂತ ಸೌಕರ್ಯ ಅಭಿವೃದ್ಧಿಗೆ 100 ಕೋಟಿ ರೂ. ಅನುದಾನ.
►ನಬಾರ್ಡ್ ಸಹಯೋಗದಲ್ಲಿ 758 ಕೋಟಿ ರೂ. ವೆಚ್ಚದಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ 26 ಜಿಲ್ಲೆಗಳ 3386 ಸರ್ಕಾರಿ ಶಾಲೆಗಳ 6469 ಶಾಲಾ ಕೊಠಡಿಗಳ ಪುನರ್ ನಿರ್ಮಾಣಕ್ಕೆ ಕ್ರಮ.
►ಶಾಸಕರು ತಮ್ಮ ಕ್ಷೇತ್ರದ ವ್ಯಾಪ್ತಿಯ ತಲಾ ಮೂರು ಶಾಲೆಗಳ ದತ್ತು ಸ್ವೀಕಾರ ಮತ್ತು ಅಭಿವೃದ್ಧಿಗೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಕ್ರಮ.
►ಪ್ರತಿ ತಿಂಗಳಲ್ಲಿ ಎರಡು ಶನಿವಾರಗಳಂದು ಬ್ಯಾಗ್ ರಹಿತ ದಿನ, “ಸಂಭ್ರಮ ಶನಿವಾರ” ಆಚರಣೆ.
►ದಾವಣಗೆರೆ, ಉಡುಪಿ ಮತ್ತು ದೊಡ್ಡಬಳ್ಳಾಪುರದಲ್ಲಿರುವ ಸ್ಕೌಟ್ಸ್ ಮತ್ತು ಗೈಡ್ಸ್ ಕೇಂದ್ರಗಳಿಗೆ ನಾಲ್ಕು ಕೋಟಿ ರೂ. ಅನುದಾನ
►ಶಿಕ್ಷಕರ ಸೇವಾ ಸೌಲಭ್ಯಗಳನ್ನು ಅಂತರ್ಜಾಲದ ಮೂಲಕ ಒದಗಿಸಲು “ಶಿಕ್ಷಕ ಮಿತ್ರ” ಎಂಬ ಮೊಬೈಲ್ ಆ್ಯಪ್ ಅಭಿವೃದ್ಧಿ.
►400 ಸರ್ಕಾರಿ ಉರ್ದು ಶಾಲೆಗಳಲ್ಲಿ ಉರ್ದು ಮಾಧ್ಯಮದೊಂದಿಗೆ ಆಂಗ್ಲ ಮಾಧ್ಯಮ ಪ್ರಾರಂಭಕ್ಕೆ ಒಂದು ಕೋಟಿ ರೂ. ಅನುದಾನ.
►ಬೆಂಗಳೂರಿನ ವಿಶ್ವೇಶ್ವರಯ್ಯ ತಾಂತ್ರಿಕ ಕಾಲೇಜನ್ನು ಐ.ಐ.ಟಿ. ಮಾದರಿಯಲ್ಲಿ ಸ್ವಾಯತ್ತಗೊಳಿಸಿ ಅಭಿವೃದ್ಧಿಪಡಿಸಲು 10 ಕೋಟಿ ರೂ. ಅನುದಾನ.
►ತಂತ್ರಜ್ಞಾನದ ನೆರವಿನಿಂದ ರಾಜ್ಯದ ವಿಶ್ವವಿದ್ಯಾನಿಲಯ ಮತ್ತು ಕಾಲೇಜುಗಳ ಆಡಳಿತ ವ್ಯವಸ್ಥೆಯ ಸಮರ್ಥ ನಿರ್ವಹಣೆಗೆ ಒಂದು ಕೋಟಿ ರೂ.ಗಳ ವೆಚ್ಚದಲ್ಲಿ ಶಾಶ್ವತ ವ್ಯವಸ್ಥೆ.
►ಇಂಟರ್ಯಾಕ್ಟೀವ್ ಆನ್-ಲೈನ್ ಕೋರ್ಸ್‍ಗಳನ್ನು (M.O.O.C) ಪ್ರಾರಂಭ ಹಾಗೂ ಗುಣಾತ್ಮಕ ಇ-ಕಂಟೆಂಟ್ ಅಭಿವೃದ್ಧಿಗೆ ಒಂದು ಕೋಟಿ ರೂ. ವೆಚ್ಚ
►ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯಡಿ ತಲಾ ಐದು ಕೋಟಿ ರೂ. ವೆಚ್ಚದಲ್ಲಿ ಜಿಯೋಸ್ಪೇಶಿಯಲ್ ತಂತ್ರಜ್ಞಾನ ಕೇಂದ್ರ ಸ್ಥಾಪನೆ.
►ಏಷ್ಯಾ ಖಂಡದ ದೇಶಗಳ ಶಿಕ್ಷಣ ಸಚಿವರ ಶೈಕ್ಷಣಿಕ ಸಮಾವೇಶ ಮತ್ತು ಬೃಹತ್ ವಸ್ತು ಪ್ರದರ್ಶನ ಆಯೋಜನೆ.
►ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ / ಆರೋಗ್ಯ ಕ್ಷೇಮ ಕೇಂದ್ರಗಳಲ್ಲಿ ಹಂತ ಹಂತವಾಗಿ 19 ಕೋಟಿ ರೂ. ವೆಚ್ಚದಲ್ಲಿ ಟೆಲಿಮೆಡಿಸನ್ ಸೇವೆ ವಿಸ್ತರಣೆ.
►ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕು ಸರ್ಕಾರಿ ಆಸ್ಪತ್ರೆ 200 ಹಾಸಿಗೆ ಆಸ್ಪತ್ರೆಯಾಗಿ ಮೇಲ್ದರ್ಜೆಗೆ.
►ಆರು ವರ್ಷದೊಳಗಿನ ಮಕ್ಕಳಲ್ಲಿ ಜನ್ಮಜಾತ ಕಿವುಡುತನ ಪತ್ತೆ ಹಚ್ಚಿ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರ ಚಿಕಿತ್ಸೆ ನಡೆಸಿ, ಶ್ರವಣಯಂತ್ರ ಒದಗಿಸಿ ಗುಣಪಡಿಸುವ ಯೋಜನೆಗೆ 28 ಕೋಟಿ ರೂ. ಅನುದಾನ.
►ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಪ್ರಾಯೋಗಿಕವಾಗಿ ಎರಡು ಜಿಲ್ಲೆಗಳಲ್ಲಿ ತಾಲ್ಲೂಕು ಆಸ್ಪತ್ರೆಗಳ ತೀವ್ರ ನಿಗಾ ಘಟಕ ನಿರ್ವಹಣೆ.
►ರಾಜ್ಯದ ಆಯ್ದ ಐದು ಜಿಲ್ಲೆಗಳಲ್ಲಿ ಐದು ಕೋಟಿ ರೂ. ವೆಚ್ಚದಲ್ಲಿ ಬಡ ರೋಗಿಗಳಿಗೆ ಉಚಿತ ಪೆರಿಟೋನಿಯಲ್ ಡಯಾಲಿಸಿಸ್ ಸೇವೆ.
►ಕೆ.ಸಿ. ಜನರಲ್ ಆಸ್ಪತ್ರೆ ಮತ್ತು ಇತರೆ ಐದು ಆಸ್ಪತ್ರೆಗಳ ತುರ್ತು ವೈದ್ಯಕೀಯ ಚಿಕಿತ್ಸಾ ವಿಭಾಗಗಳನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಮೇಲ್ದರ್ಜೆಗೇರಿಸಿ ಉತ್ಕೃಷ್ಟತಾ ಕೇಂದ್ರಗಳನ್ನಾಗಿ (Centre of Excellence) ಅಭಿವೃದ್ಧಿಪಡಿಸಲು ಐದು ಕೋಟಿ ರೂ. ಅನುದಾನ.
►ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆ ಮತ್ತು ಸಿ.ವಿ. ರಾಮನ್ ಆಸ್ಪತ್ರೆಗಳಲ್ಲಿ ಹೃದಯ ರೋಗದ ಚಿಕಿತ್ಸೆಗಾಗಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದೊಂದಿಗೆ ಕ್ಯಾತ್‍ಲ್ಯಾಬ್ ಸ್ಥಾಪನೆ.
►ಹಾವೇರಿ ಜಿಲ್ಲೆಯಲ್ಲಿ 20 ಕೋಟಿ ರೂ. ವೆಚ್ಚದಲ್ಲಿ 20 ಹಾಸಿಗೆಗಳ ಆಯುಷ್ ಸಂಯುಕ್ತ ಆಸ್ಪತ್ರೆ ಪ್ರಾರಂಭ. ಐದು ಕೋಟಿ ರೂ.ಗಳ ಅನುದಾನ ಒದಗಿಸಲಾಗುವುದು.
►ರಾಜ್ಯದ 17 ವೈದ್ಯಕೀಯ ಕಾಲೇಜು ಆಸ್ಪತ್ರೆಗಳ ನವಜಾತ ಶಿಶುವಿನ ತೀವ್ರ ನಿಗಾ ಘಟಕಗಳ (Neonatal Intensive Care Unit) ಹಂತ ಹಂತವಾಗಿ ಉನ್ನತೀಕರಣ ಹಾಗೂ ರಾಜ್ಯದ ವಿವಿಧ ಭಾಗಗಳಲ್ಲಿ ಮಂಗಳೂರಿನ ವಿಭಾಗೀಯ ಆಧುನಿಕ ಮಕ್ಕಳ ಆರೋಗ್ಯ ಕೇಂದ್ರದ ಮಾದರಿಯ ಕೇಂದ್ರಗಳ ಸ್ಥಾಪನೆ.
►ಎಲ್ಲಾ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ತಲಾ ಮೂರು ಕೋಟಿ ರೂ. ವೆಚ್ಚದಲ್ಲಿ ಸಿಮ್ಯುಲೇಷನ್ ಲ್ಯಾಬ್ ಮತ್ತು ತಲಾ 30 ಲಕ್ಷ ರೂ. ವೆಚ್ಚದಲ್ಲಿ ಮಾಲಿಕ್ಯುಲಾರ್ ಬಯಾಲಜಿ ಲ್ಯಾಬ್ ಸ್ಥಾಪನೆ.
►ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಆರ್ಥಿಕ ನೆರವಿನೊಂದಿಗೆ ಚರ್ಮಶಾಸ್ತ್ರ ಮತ್ತು ಸೌಂದರ್ಯವರ್ಧಕ ಶಾಸ್ತ್ರದ ಸಂಸ್ಥೆ ಮತ್ತು ಜಿರಿಯಾಟ್ರಿಕ್ಸ್ ಸಂಸ್ಥೆಗಳ ಸ್ಥಾಪನೆ.
►ವೈದ್ಯಕೀಯ, ಶುಶ್ರೂಷಾ, ಅರೆ-ವೈದ್ಯಕೀಯ ಮತ್ತು ಫಾರ್ಮಸಿ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಒಂದು ಕೇಂದ್ರೀಕೃತ ಉದ್ಯೋಗ ಕೋಶ ಸ್ಥಾಪನೆ.
►ಆಯವ್ಯಯದಲ್ಲಿ ಮಹಿಳೆಯರ ಕಲ್ಯಾಣಕ್ಕಾಗಿ 37,783 ಕೋಟಿ ರೂ.ಗಳ 953 ಕಾರ್ಯಕ್ರಮಗಳ ನಿಗದಿ. ಇದು ಒಟ್ಟಾರೆ ಆಯವ್ಯಯ ಗಾತ್ರದ ಶೇ.15.88 ರಷ್ಟು.
►ರಾಜ್ಯದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಮಕ್ಕಳ ಆಯವ್ಯಯ ಮಂಡನೆ. ರಾಜ್ಯದಲ್ಲಿರುವ 18 ವರ್ಷದ ಕೆಳಗಿರುವ ಎಲ್ಲಾ ಮಕ್ಕಳ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆ ಅಡಕ. 2020-21ನೇ ಸಾಲಿನ ಆಯವ್ಯಯದಲ್ಲಿ 36,340 ಕೋಟಿ ರೂ.ಗಳ 279 ಕಾರ್ಯಕ್ರಮಗಳ ಪ್ರಸ್ತಾಪ. ಇದು ಒಟ್ಟಾರೆ ಆಯವ್ಯಯ ಗಾತ್ರದ 15.28 ರಷ್ಟು.
►ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ರಾಜ್ಯದಲ್ಲಿ ಏಳು ಹೊಸ ಬಾಲಮಂದಿರಗಳ ಸ್ಥಾಪನೆ. 5.67 ಕೋಟಿ ರೂ. ಅನುದಾನ.
►ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿಯಲ್ಲಿ ಬೆಂಗಳೂರಿನ ಹೊಸೂರು ರಸ್ತೆಯಲ್ಲಿರುವ ಸುಧಾರಣಾ ಸಂಸ್ಥೆಗಳ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್. ಐದು ಕೋಟಿ ರೂ. ಅನುದಾನ.
►ನೆರೆ ಹಾವಳಿಯಿಂದ ಹಾನಿಯಾದ 842 ಅಂಗನವಾಡಿ ಕೇಂದ್ರಗಳ ಪುನರ್ ನಿರ್ಮಾಣಕ್ಕೆ 138 ಕೋಟಿ ರೂ.
►ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಎಲ್ಲಾ ಕಾರ್ಯಕ್ರಮಗಳನ್ನು ಪಾರದರ್ಶಕವಾಗಿ ಮಹಿಳೆಯರಿಗೆ ತಲುಪಿಸಲು ಮಹಿಳಾ ಸುರಕ್ಷತಾ ಪೋರ್ಟಲ್ ಪ್ರಾರಂಭ.
►ಬಾಲಮಂದಿರದಿಂದ 21 ವರ್ಷ ತುಂಬಿದ ನಂತರ ಬಿಡುಗಡೆ ಹೊಂದುವವರಿಗೆ ಜೀವನೋಪಾಯ ರೂಪಿಸಿಕೊಳ್ಳಲು “ಉಪಕಾರ” ಯೋಜನೆಯಡಿ ಮೂರು ವರ್ಷ ಅವಧಿಗೆ ಮಾಸಿಕ 5000 ರೂ. ಆರ್ಥಿಕ ನೆರವು; ಕೌಶಲ್ಯಾಭಿವೃದ್ಧಿ ತರಬೇತಿಗೆ ಕ್ರಮ. ಒಂದು ಕೋಟಿ ರೂ. ಅನುದಾನ.
►ಅಂಗನವಾಡಿಗಳಿಗೆ ಪೌಷ್ಟಿಕ ಆಹಾರ ಪದಾರ್ಥಗಳನ್ನು ಸರಬರಾಜು ಮಾಡುವ ಮಹಿಳಾ ಪೂರಕ ಪೌಷ್ಟಿಕ ಉತ್ಪಾದನಾ ಕೇಂದ್ರಗಳ ಆಧುನೀಕರಣಕ್ಕೆ ಮಹಿಳಾ ಅಭಿವೃದ್ಧಿ ನಿಗಮದಿಂದ 20 ಲಕ್ಷ ರೂ. ವರೆಗೆ ಬಡ್ಡಿ ರಹಿತ ಕಿರು ಸಾಲ ಸೌಲಭ್ಯ. 20 ಕೋಟಿ ರೂ. ಅನುದಾನ.
►ಸ್ತ್ರೀಶಕ್ತಿ ಸ್ವ-ಸಹಾಯ ಸಂಘದ ಉತ್ಪನ್ನಗಳನ್ನು ಸರ್ಕಾರದ ಇಲಾಖೆಗಳಲ್ಲಿ ಅವಶ್ಯಕತೆಗನುಸಾರ ಖರೀದಿಸಲು ಕ್ರಮ.
►ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಟ್ರಾನ್ಸ್‍ಜೆಂಡರ್‍ರವರ ಮೂಲಹಂತದ (Base line) ಸಮೀಕ್ಷೆ ಕೈಗೊಳ್ಳಲು 70 ಲಕ್ಷ ರೂ. ಅನುದಾನ.
►ಶ್ರವಣದೋಷವುಳ್ಳ ವ್ಯಕ್ತಿಗಳ ಸ್ವಯಂ ಉದ್ಯೋಗಕ್ಕಾಗಿ ಹೊಲಿಗೆ ಯಂತ್ರ ವಿತರಿಸಲು 60 ಲಕ್ಷ ರೂ. ಅನುದಾನ
►ದೃಷ್ಟಿದೋಷವುಳ್ಳ ವ್ಯಕ್ತಿಗಳಿಗಾಗಿ ಬೆಂಗಳೂರಿನಲ್ಲಿ ಹಾಗೂ ಕಲಬುರಗಿಯಲ್ಲಿ 30 ಲಕ್ಷ ರೂ.ಗಳ ವೆಚ್ಚದಲ್ಲಿ ಬ್ರೈಲ್ ಕಂ ಟಾಕಿಂಗ್ ಲೈಬ್ರರಿ ಸ್ಥಾಪನೆ. ಮೈಸೂರಿನ ಸರ್ಕಾರಿ ಬ್ರೈಲ್ ಮುದ್ರಣಾಲಯಕ್ಕೆ 80 ಲಕ್ಷ ರೂ.ಗಳ ವೆಚ್ಚದಲ್ಲಿ ಆಧುನಿಕ ಮುದ್ರಣ ಯಂತ್ರ ಖರೀದಿ.
►ರಾಜ್ಯದ 500 ಅಂಧ ವಿದ್ಯಾರ್ಥಿಗಳಿಗೆ ತಲಾ 25,000 ರೂ.ಗಳ ಮೊತ್ತದ ಟಾಕಿಂಗ್ ಮೊಬೈಲ್, ಬ್ರೈಲ್ ವಾಚ್ ಹಾಗೂ ವಾಕಿಂಗ್ ಸ್ಟಿಕ್‍ಗಳನ್ನೊಳಗೊಂಡ ಕಿಟ್ ವಿತರಣೆ. 1.25 ಕೋಟಿ ರೂ. ಅನುದಾನ.
►ಅಂಧ ತಾಯಂದಿರಿಗೆ ನೀಡುವ ಮಾಸಿಕ 2000 ರೂ. ಶಿಶುಪಾಲನಾ ಭತ್ತೆ ಯೋಜನೆ ಮಗುವಿನ ಮೊದಲ ಎರಡು ವರ್ಷಗಳಿಂದ ಐದು ವರ್ಷದ ವರೆಗೆ ವಿಸ್ತರಣೆ.
►“ಮುಖ್ಯಮಂತ್ರಿಗಳ ಆರೋಗ್ಯ ಸುರಕ್ಷಾ”ಯೋಜನೆಯಡಿಯಲ್ಲಿ ಒಂದು ಲಕ್ಷ ನೋಂದಾಯಿತ ಕಟ್ಟಡ ಕಾರ್ಮಿಕರು ಮತ್ತು ಅವರ ಕುಟುಂಬದ ಸದಸ್ಯರುಗಳಿಗೆ ಅನುಮೋದಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು “ಉಚಿತ ಪ್ರಿಪೇಯ್ಡ್ ಹೆಲ್ತ್ ಕಾರ್ಡ್” ವಿತರಣೆ.
►“ವನಿತಾ ಸಂಗಾತಿ”ಯೋಜನೆಯಡಿ ಗಾರ್ಮೆಂಟ್ ಉದ್ಯಮಗಳಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಕಾರ್ಮಿಕರಿಗೆ ಉಚಿತ ಬಿಎಂಟಿಸಿ ಮಾಸಿಕ ಬಸ್ ಪಾಸ್ ವಿತರಣೆಗೆ 25 ಕೋಟಿ ರೂ. ಅನುದಾನ.
►ನಗರ ಪ್ರದೇಶಗಳಲ್ಲಿ ದುಡಿಯುತ್ತಿರುವ ಕಟ್ಟಡ ಕಾರ್ಮಿಕರು ಮತ್ತು ಅವರ ಕುಟುಂಬಸ್ಥರ ಆರೋಗ್ಯ ರಕ್ಷಣೆಗೆ 10 “ಮೊಬೈಲ್ ಕ್ಲಿನಿಕ್”ಪ್ರಾರಂಭ.
►ಕಟ್ಟಡ ಕಾರ್ಮಿಕರ ಮಕ್ಕಳ ಪಾಲನೆಗೆ ಕಟ್ಟಡ ನಿರ್ಮಾಣ
►ಸ್ಥಳದಲ್ಲಿ 10 ಸಂಚಾರಿ ಶಿಶುಪಾಲನಾ ಕೇಂದ್ರಗಳನ್ನು ಒಳಗೊಂಡಂತೆ
►ಒಟ್ಟು 110 “ಕಿತ್ತೂರು ರಾಣಿ ಚೆನ್ನಮ್ಮ” ಶಿಶು ಪಾಲನಾ ಕೇಂದ್ರಗಳ ಸ್ಥಾಪನೆ.
►“ಆಹಾರ” ತಂತ್ರಾಂಶ ಉನ್ನತೀಕರಿಸಲು ಕ್ರಮ.
►ಕಾನೂನು ಮಾಪನ ಶಾಸ್ತ್ರ ಇಲಾಖೆಯ ಚಟುವಟಿಕೆಗಳ ಮೇಲ್ವಿಚಾರಣೆ ಮತ್ತು ಉಸ್ತುವಾರಿ ಬಿಗಿಗೊಳಿಸಲು “ಇ-ಮಾಪನ” ತಂತ್ರಾಂಶ ಉನ್ನತೀಕರಣ.
►2020-21ನೇ ಸಾಲಿನಲ್ಲಿ ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ ವಲಯಕ್ಕೆ ನಿಗದಿ ಪಡಿಸಿದ ಒಟ್ಟು ಅನುದಾನ 72,093 ಕೋಟಿ ರೂ.







