ದಾಭೋಲ್ಕರ್ ಹತ್ಯೆಗೆ ಬಳಸಲಾಗಿತ್ತು ಎನ್ನಲಾದ ಬಂದೂಕು ಅರಬ್ಬೀ ಸಮುದ್ರದಲ್ಲಿ ಪತ್ತೆ
ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿದ ಸಿಬಿಐ

ಮುಂಬೈ: ವಿಚಾರವಾದಿ ನರೇಂದ್ರ ದಾಭೋಲ್ಕರ್ ಅವರ ಹತ್ಯೆ ಪ್ರಕರಣ ಕುರಿತಾದ ಮಹತ್ವದ ಬೆಳವಣಿಗೆಯಲ್ಲಿ ದಾಭೋಲ್ಕರ್ ಅವರ ಹತ್ಯೆಗೆ ಬಳಸಲಾಗಿದೆಯೆಂದು ತಿಳಿಯಲಾದ ಪಿಸ್ತೂಲನ್ನು ಸಿಬಿಐ ಅರಬ್ಬೀ ಸಮುದ್ರದಲ್ಲಿ ಪತ್ತೆ ಹಚ್ಚಿದೆ. ನಾರ್ವೇ ದೇಶದ ಮುಳುಗು ತಜ್ಞರ ಸಹಾಯದಿಂದ ಈ ಪಿಸ್ತೂಲನ್ನು ವಶಪಡಿಸಿಕೊಳ್ಳಲಾಗಿದೆ.
ಪಿಸ್ತೂಲನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದ್ದು, ಇದೇ ಪಿಸ್ತೂಲಿನಿಂದ ದಾಭೋಲ್ಕರ್ ಹತ್ಯೆ ನಡೆದಿತ್ತೇ ಎಂಬುದನ್ನು ವರದಿ ದೃಢಪಡಿಸಲಿದೆ.
ದಾಭೋಲ್ಕರ್ ಅವರನ್ನು ಆಗಸ್ಟ್ 2013ರಲ್ಲಿ ಪುಣೆಯಲ್ಲಿ ಹತ್ಯೆಗೈಯ್ಯಲಾಗಿತ್ತು. ಅವರ ಹತ್ಯೆಗೆ ಬಳಸಲಾದ ಪಿಸ್ತೂಲನ್ನು ಥಾಣೆ ಸಮೀಪದ ಖಾರೆಗಾಂವ್ ಕ್ರೀಕ್ ನಲ್ಲಿ ಹುಡುಕುವ ಅಗತ್ಯವಿದೆ ಎಂದು ಸಿಬಿಐ ಆಗಸ್ಟ್ 2019ರಲ್ಲಿ ಪುಣೆ ಕೋರ್ಟಿಗೆ ಹೇಳಿತ್ತು. ಈ ಕಾರ್ಯಕ್ಕಾಗಿ ಸಿಬಿಐ ದುಬೈ ಮೂಲದ ಎನ್ವಿಟೆಕ್ ಮೆರೈನ್ ಕನ್ಸಲ್ಟೆಂಟ್ಸ್ ಸಹಾಯ ಪಡೆದಿತ್ತಲ್ಲದೆ, ಈ ಸಂಸ್ಥೆ ಸಾಗರದ ತಳದಲ್ಲಿ ಹುಡುಕಲು ನಾರ್ವೇಯಿಂದ ಯಂತ್ರೋಪಕರಣಗಳನ್ನು ತರಿಸಿತ್ತು. ಈ ಶೋಧ ಕಾರ್ಯಕ್ಕೆ ರೂ 7.5 ಕೋಟಿ ವೆಚ್ಚ ತಗಲಿತ್ತು.





