ಭಟ್ಕಳ: ಕೃಷಿ ವಲಯ ಸೊರಗುತ್ತಿರುವುದು ಉತ್ತಮ ಬೆಳವಣಿಗೆಯಲ್ಲ; ಕೃಷಿ ಅಧಿಕಾರಿ ಮಣಿವಣ್ಣನ್

ಭಟ್ಕಳ: ಕೃಷಿಕರು ಬೇಸಾಯದಿಂದ ವಿಮುಖರಾಗುವ ಮೂಲಕ ಕೃಷಿ ವಲಯ ಸೊರಗುವುದಕ್ಕೆ ಕಾರಣರಾಗುತ್ತಿರುವುದು ಉತ್ತಮ ಬೆಳವಣಿಗೆಯಲ್ಲ ಎಂದು ಸಿಂಡಿಕೇಟ್ ಬ್ಯಾಂಕಿನ ಕೃಷಿ ಅಧಿಕಾರಿ ಮಣಿವಣ್ಣನ್ ಆತಂಕ ವ್ಯಕ್ತಪಡಿಸಿದ್ದಾರೆ.
ಅವರು ಮಂಗಳವಾರ ಸಿಂಡಕೇಟ್ ಬ್ಯಾಂಕ್ ವಲಯ ಕಚೇರಿ ಮಣಿಪಾಲದಲ್ಲಿ ನಡೆದ ಗ್ರಾಮೀಣ ಕೃಷಿ ವಿಸ್ತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಆರಂಭದಿಂದಲೂ ಸಿಂಡಿಕೇಟ್ ಬ್ಯಾಂಕ್ ಕೃಷಿಕರು ಮತ್ತು ಸಣ್ಣ ಉದ್ದಿಮೆದಾರರ ಪರವಾಗಿದೆ. ಕೃಷಿ ಮತ್ತು ಕೃಷಿ ಸಂಬಂಧಿ ಚಟುವಟಿಕೆಗಳಿಗೆ ಬ್ಯಾಂಕ್ ಸಹಾಯ ನೀಡಲು ಯಾವತ್ತೂ ಸಿದ್ಧವಿದೆ. ಕೃಷಿಕರ ಆದಾಯವನ್ನು ದುಪ್ಪಟ್ಟು ಮಾಡುವ ನಿಟ್ಟಿನಲ್ಲಿ ಪೂರಕ ವಾತಾವರಣ ನಿರ್ಮಿಸಲು ಬ್ಯಾಂಕ್ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದರು. ಮಣಿಪಾಲ ವಲಯದ ಪ್ರಧಾನ ವ್ಯವಸ್ಥಾಪಕ ಭಾಸ್ಕರ ಹಂಡೆ, ಬ್ಯಾಂಕಿನ ಕಾರ್ಯಕಾರಿ ನಿರ್ದೇಶಕ ನಾಗೇಶ್ವರ ರಾವ್, ಡಿಐಸಿಯ ಜಂಟಿ ನಿರ್ದೇಶಕ ಗೋಕುಲದಾಸ ನಾಯಕ್, ಪ್ರಧಾನ ವ್ಯವಸ್ಥಾಪಕ ಎಸ್.ಎಸ್.ಹೆಗಡೆ, ಸಹಾಯಕ ತೋಟಗಾರಿಕಾ ನಿರ್ದೇಶಕ ಕೆಂಪೇಗೌಡ, ರಾಮಾ ನಾಯ್ಕ, ಭಟ್ಕಳ ಶಾಖೆಯ ಹಿರಿಯ ವ್ಯವಸ್ಥಾಪಕ ಸಂಜೀತ್ ಸಿಂಗ್ ಮಾತನಾಡಿದರು. ಈ ಸಂದರ್ಭದಲ್ಲಿ ಉದಯೋನ್ಮುಖ ಉದ್ಯಮಿಗಳಾದ ಭಟ್ಕಳ ಡಿಜಿಗೋ ಮಾಲಕ ರಾಮಚಂದ್ರ ಕಿಣಿ, ಕೋಣಾರದ ಉಮೇಶ ನಾಯ್ಕ ಸೇರಿದಂತೆ ಕೃಷಿ ಹಾಗೂ ಸಣ್ಣ ಉದ್ಯಮದಲ್ಲಿ ಸಾಧನೆಗೈದವರನ್ನು ಸನ್ಮಾನಿಸಿ ಗೌರವಿಸಲಾಯಿತು.





