ರಾಜ್ಯ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಕುಮಾರಸ್ವಾಮಿ

ಬೆಂಗಳೂರು, ಮಾ.5: ಆರೋಗ್ಯ ಕ್ಷೇತ್ರಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಜೆಟ್‌ನಲ್ಲಿ ಘೋಷಿಸಿರುವ ಅನುದಾನ ಸಾಕಾಗುವುದಿಲ್ಲ. ಅದರಲ್ಲಿ, ಆಸ್ಪತ್ರೆಗಳಿಗೆ ಸುಣ್ಣ-ಬಣ್ಣ ಬಳಿಯುವುದಕ್ಕೂ ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವು ಸವಾಲುಗಳ ನಡುವೆಯೂ ರಾಜ್ಯದ ತೆರಿಗೆ ಸಂಗ್ರಹ ಪರಿಸ್ಥಿತಿ ಉತ್ತಮವಾಗಿದೆ. ಕಳೆದ ಬಾರಿ ನಾವು ಬಜೆಟ್ ಮಂಡನೆ ವೇಳೆ ನಾವು ನಿರೀಕ್ಷೆ ಮಾಡಿದಷ್ಟು ಶೇ.14ರಷ್ಟು ತೆರಿಗೆ ಹೆಚ್ಚಿನ ಸಂಗ್ರಹವಾಗಿದೆ ಎಂದರು.
ನಮ್ಮ ಸರಕಾರದ ಅವಧಿಯಲ್ಲಿ ಜಾರಿಯಲ್ಲಿದ್ದ ಯೋಜನೆಗಳನ್ನೆ ಮುಂದುವರಿಸಲಾಗಿದೆ. ಅಲ್ಲದೆ, ಈ ಬಾರಿ ಮಂಡಿಸಲಾದ ಘೋಷಣೆಗಳಲ್ಲಿ ಸ್ಪಷ್ಟತೆ ಇಲ್ಲ. ಬಿಜೆಪಿಯವರಿಂದ ಹೊಸ ಯೋಜನೆಗಳನ್ನು ಜಾರಿಗೆ ತರಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.
ಕೇಂದ್ರದಿಂದ ರಾಜ್ಯಕ್ಕೆ ಸಿಗಬೇಕಾದ ತೆರಿಗೆ ಪಾಲು ಸಿಗುತ್ತೊ ಇಲ್ಲವೊ ಎಂಬ ಅನುಮಾನ ರಾಜ್ಯ ಸರಕಾರಕ್ಕೆ ಇದೆ. ಸರಕಾರದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ ಎಂಬುದನ್ನು ಯಡಿಯೂರಪ್ಪನವರೇ ಹೇಳಿಕೊಂಡಿದ್ದಾರೆ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.







