'ದುರ್ಬಲ ಬಜೆಟ್', 'ಸರ್ವತೋಮುಖ ಅಭಿವೃದ್ಧಿಗೆ ಪೂರಕ...'
ಬಜೆಟ್ ಬಗ್ಗೆ ರಾಜ್ಯ ರಾಜಕೀಯ ನಾಯಕರು, ಗಣ್ಯರು ಪ್ರತಿಕ್ರಿಯಿಸಿದ್ದು ಹೀಗೆ

ಬೆಂಗಳೂರು, ಮಾ.5: ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಮಂಡಿಸಿದ ರಾಜ್ಯ ಬಜೆಟ್ ಬಗ್ಗೆ ರಾಜ್ಯ ರಾಜಕೀಯ ನಾಯಕರು, ಗಣ್ಯರು ಪ್ರತಿಕ್ರಿಯಿಸಿದ್ದಾರೆ.
ಅಭಿಪ್ರಾಯಗಳು
ಕೇಂದ್ರ ಸರಕಾರ ಮಂಡಿಸಿದ್ದ ಬಜೆಟ್ಟೇ ದುರ್ಬಲ ಅಂದುಕೊಂಡಿದ್ದೆ. ಅದಕ್ಕಿಂತ ದುರ್ಬಲ ಬಜೆಟ್ ಅನ್ನು ಯಡಿಯೂರಪ್ಪ ನೀಡಿದ್ದಾರೆ. ಮುಖ್ಯಮಂತ್ರಿಗಳು ರಾಜ್ಯಕ್ಕೂ ಶಕ್ತಿ ಕೊಡಲಿಲ್ಲ. ಜನರಿಗೂ ಶಕ್ತಿ ಕೊಡಲಿಲ್ಲ. ಇದು ರಾಜ್ಯಕ್ಕೆ ದೊಡ್ಡ ಅನ್ಯಾಯ. ಉತ್ತರ ಕರ್ನಾಟಕದ ಮಿರ್ಚಿ ಮಂಡಕ್ಕಿಯಲ್ಲಿ ಉಪ್ಪುಖಾರ ಇರುತ್ತೆ. ಈ ಬಜೆಟ್‌ನಲ್ಲಿ ಖಾರವೂ ಇಲ್ಲ, ಉಪ್ಪೂ ಇಲ್ಲ, ಶಕ್ತಿಯೂ ಇಲ್ಲ. ಯಡಿಯೂರಪ್ಪ ಅವರು ಹುರುಪಿನಲ್ಲಿ ಸರಕಾರ ಮಾಡಿದರು. ಆದರೆ ಆ ಹುರುಪು ಅವರ ಬಜೆಟ್‌ನಲ್ಲಿ ಕಾಣಿಸುತ್ತಿಲ್ಲ. ಯಡಿಯೂರಪ್ಪ ಅವರಲ್ಲಿ ಶಕ್ತಿ ಇಲ್ಲ.
-ಡಿ.ಕೆ ಶಿವಕುಮಾರ್, ಮಾಜಿ ಸಚಿವ
ಕಲ್ಯಾಣ ಕರ್ನಾಟಕಕ್ಕೆ ಬಿಜೆಪಿ ಸರಕಾರದ ಕೊಡುಗೆ ಶೂನ್ಯ. ಕೇವಲ ಹೆಸರಿನ ಬದಲಾವಣೆಯಿಂದ ನಮ್ಮ ಭಾಗದ ಜನರ ಭವಿಷ್ಯ ಬದಲಾಗುವುದಿಲ್ಲ. ಬಿಜೆಪಿ ಈ ಮೊದಲು 371ಜೆ ಅನ್ನು ತಿರಸ್ಕರಿಸಿತ್ತು. ಈಗ ಬಜೆಟ್‌ನಲ್ಲಿಯೂ ಈ ಪ್ರದೇಶವನ್ನು ಕಡೆಗಣಿಸಿದೆ. ಕಾಂಗ್ರೆಸ್ ಸರಕಾರದಿಂದ ಅನ್ಯಾಯವಾಗುತ್ತಿದೆ ಎಂದು ರಾಜೀನಾಮೆ ನೀಡಿದ ರಾಜಕಾರಣಿಗಳು ಎಲ್ಲಿದ್ದಾರೆ ?
-ಪ್ರಿಯಾಂಕ್ ಖರ್ಗೆ, ಮಾಜಿ ಸಚಿವ
ರೈತರು ಹಾಗೂ ಗ್ರಾಮೀಣ ಪ್ರದೇಶವನ್ನು ಕಡೆಗಣಿಸಿದ ಬಿಎಸ್‌ವೈ ಬಜೆಟ್. ನಗರಾಭಿವೃದ್ಧಿಗೆ ಶೇ.11ರಷ್ಟು ಆದ್ಯತೆ. ಕೃಷಿ ಹಾಗೂ ತೋಟಗಾರಿಕೆಗೆ ಸೇರಿ ಶೇ.3ರಷ್ಟು ನೀಡಿರುವುದು ಸಿಎಂ ಅವರ ರೈತರ ಮೇಲಿನ ಕಾಳಜಿ ತೋರಿಸುತ್ತದೆ.
-ಸಚಿನ್ ಮೀಗಾ, ಕರ್ನಾಟಕ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ
ದೇಶ ಮತ್ತು ರಾಜ್ಯದಲ್ಲಿ ಆಗುತ್ತಿರುವ ಆರ್ಥಿಕ ಕುಸಿತ ರಾಜ್ಯ ಬಜೆಟ್‌ನಲ್ಲಿ ಎದ್ದು ಕಂಡಿವೆ. ವಿಜಯಪುರ ಜಿಲ್ಲೆಯಲ್ಲಿ ನೀರಾವರಿಗೆ ಯಾವುದೇ ಯೋಜನೆಗಳನ್ನು ಪ್ರಕಟಿಸಿಲ್ಲ. ಬಹುದಿನದ ಬೇಡಿಕೆಯಾದ ಅನುಭವ ಮಂಟಪಕ್ಕೆ 100 ಕೋಟಿ ರೂ.ಗಳ ಹಣ ಇಟ್ಟಿರುವುದು ತುಸು ನೆಮ್ಮದಿ ತಂದಿದೆ. ಬಿಜೆಪಿ ಸರಕಾರದ ಬಜೆಟ್ ರೈತರ, ಯುವಕರು ಸೇರಿದಂತೆ ಯಾವ ವರ್ಗಕ್ಕೂ ಅನುಕೂಲಕರವಾದ ಬಜೆಟ್ ಅಲ್ಲ.
-ಈಶ್ವರ್ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ
ಬಜೆಟ್‌ನಲ್ಲಿ ರಾಜ್ಯದ ಜನರಿಗೆ ಯಾವುದೇ ಕೊಡುಗೆಯಿಲ್ಲ. ಇದು ಸ್ಪಷ್ಟ ದೃಷ್ಟಿಕೋನವಿಲ್ಲದ ಬಜೆಟ್ ಆಗಿದ್ದು, ಗೊಂದಲದ ವಾತಾವರಣದಲ್ಲಿ ಆಯವ್ಯಯ ಮಂಡನೆಯಾಗಿದೆ. ತಪ್ಪು ಆರ್ಥಿಕ ನೀತಿಗಳು ಅರ್ಥವಾಗುತ್ತಿವೆ. ಬಿಜೆಪಿಯ ಮೂರ್ಖತನದ ತೀರ್ಮಾನ ಹಲವು ಗೊಂದಲಗಳಿಗೆ ಎಡೆಮಾಡಿಕೊಟ್ಟಿದ್ದು, ರಾಜ್ಯದ ಅಭಿವೃದ್ಧಿಗೂ ಸಾಕಷ್ಟು ಹಿನ್ನಡೆಯಾಗಿದೆ.
-ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ
ಸಿಎಂ ರಾಜ್ಯದ ಸರ್ವ ಜನಾಂಗದ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು, ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿ 2020-21ನೇ ಸಾಲಿನ ಆಯವ್ಯಯವನ್ನು ಮಂಡಿಸಿದ್ದಾರೆ. ರಾಜ್ಯವು ನೆರೆ-ಬರ, ರೈತರ ಸಾಲಮನ್ನಾ ಯೋಜನೆಯ ವ್ಯವಸ್ಥಿತ ಅನುಷ್ಠಾನ ಸೇರಿದಂತೆ, ರಾಜ್ಯ ಸರ್ಕಾರವು ಆರ್ಥಿಕ ಸಂಕಷ್ಟದಲ್ಲಿದ್ದರೂ ಮುಖ್ಯಮಂತ್ರಿಗಳು ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಅತ್ಯುತ್ತಮವಾದ ಆಯವ್ಯಯವನ್ನು ಮಂಡಿಸಿದ್ದಾರೆ.
-ಗೋವಿಂದ ಎಂ. ಕಾರಜೋಳ, ಉಪಮುಖ್ಯಮಂತ್ರಿ
2019-20 ರ ಬಜೆಟ್‌ನಲ್ಲಿ 30444.99 ಕೋಟಿಯನ್ನು ಎಸ್‌ಟಿಪಿ/ಟಿಎಸ್‌ಪಿ ಯೋಜನೆ ಮೀಸಲಿಡಲಾಗಿತ್ತು. ಈ ವರ್ಷ ದಲಿತ ವಿರೋಧಿ ಬಿಜೆಪಿಯ ಸರಕಾರದ ಯಡಿಯೂರಪ್ಪ ಮಂಡಿಸಿದ ಬಜೆಟ್‌ನಲ್ಲಿ 26930 ಕೋಟಿ ನಿಗದಿ ಮಾಡಲಾಗಿದೆ. ಕಳೆದ ಬಜೆಟ್ ಹೋಲಿಸಿದರೆ 3514 ಕೋಟಿ ಹಣವನ್ನು ಕಡಿತ ಮಾಡಲಾಗಿದೆ. ಈ ಮೂಲಕ ಯೋಜನೆಯ ಮೂಲ ಆಶಯವನ್ನೇ ನಾಶ ಮಾಡಲು ಬಿಜೆಪಿ ಸರಕಾರ ಮುಂದಾಗಿದೆ.
-ಬಿ.ಎಸ್.ರಾಜಶೇಖರಮೂರ್ತಿ, ದಲಿತ ಹಕ್ಕುಗಳ ಹೋರಾಟ ಸಮಿತಿಯ ಸಂಚಾಲಕ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಮಂಡಿಸಿದ ಬಜೆಟ್‌ನಲ್ಲಿ ಗುತ್ತಿಗೆ ನೌಕರರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಇದು ಅತ್ಯಂತ ಖಂಡನೀಯ ಹಾಗೂ ವಿಷಾದಕರ. ಬಜೆಟ್‌ನಲ್ಲಿ ಹಿಂದುಳಿದ ವರ್ಗಗಳ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಹಾಸ್ಟೆಲ್ ಗಳ ಬಗ್ಗೆ ಹಾಗೂ ಅಲ್ಲಿ ಕೆಲಸ ಮಾಡುವ ನೌಕರರ ಬಗ್ಗೆ ಕಾಳಜಿಯಿಲ್ಲದಂತಾಗಿದೆ. ಇದು ಕೃಷಿ-ಕೂಲಿಕಾರರ ವಿರೋಧಿ ಬಜೆಟ್ ಆಗಿದೆ.
-ಹನುಮೇಗೌಡ, ರಾಜ್ಯ ಸರಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಮುಖಂಡರು
ರಾಜ್ಯದ ಆರ್ಥಿಕ ಬೆಳವಣಿಗೆಯ ಬಗ್ಗೆ ಯಾವುದೇ ಮುಂಗಾಣಿಕೆಯಿಲ್ಲದೆ, ತೇಪೆ ಹಚ್ಚುವ ಬಜೆಟ್ ಇದಾಗಿದೆ. ಹಲವು ಆರ್ಥಿಕ ನೀತಿಯ ಕ್ರಮಗಳಿಂದ ರಾಜ್ಯದ ಬೆಳವಣಿಗೆ ಸಾಧ್ಯವಿದೆ. ಇಂದಿನ ಬಿಕ್ಕಟ್ಟಿನ ಸಂದರ್ಭದಲ್ಲಿ ಅತ್ಯಂತ ಅವಶ್ಯವಿರುವ ಕ್ರಮ ರೈತರ ಬೆಳೆಗೆ ಬೆಂಬಲ ಬೆಲೆ, ಕೂಲಿಕಾರ, ಕಾರ್ಮಿಕರಿಗೆ ಕನಿಷ್ಟ ಕೂಲಿ ಏರಿಕೆ ಮತ್ತು ಖಾತರಿಗೊಳಿಸುವ ಕ್ರಮಗಳಾಗಿವೆ. ಇದು ಒಟ್ಟಾರೆ ರಾಜ್ಯದ ಬೆಳವಣಿಗೆಯ ದಾರಿ. ಆದರೆ ಅದನ್ನು ಮಾಡುವ ರಾಜಕೀಯ ಇಚ್ಛೆ ಬಿಜೆಪಿಯಲ್ಲಿ ಇಲ್ಲ. ಯಡಿಯೂರಪ್ಪ ಅವರ ವೈಯುಕ್ತಿಕ ಆರ್ಥಿಕ ಅರಿವು ಎಷ್ಟಕ್ಕೆ ಸೀಮಿತವಾಗಿದೆ ಎಂಬುದಕ್ಕೆ ಈ ಬಜೆಟ್ ಸಾಕ್ಷಿಯಾಗಿದೆ.
-ಜಿ.ಎನ್.ನಾಗರಾಜ್, ಸಿಪಿಎಂ ಮುಖಂಡರು
ಹಿಂದುಳಿದ ವರ್ಗಗಳ ಸಂಪೂರ್ಣ ನಿರ್ಲಕ್ಷ್ಯ ತಾಂಡವವಾಡುತ್ತಿದೆ. ಆದರೆ, ಸಾರ್ವಜನಿಕವಾಗಿ ಗಮನಿಸಿದರು ಸಹ ಬಜೆಟ್‌ನಲ್ಲಿ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ. ಮೇಲ್ನೋಟಕ್ಕೆ ರಾಜಕೀಯ ದೃಷ್ಟಿಕೋನ ಒಳಗೊಂಡಿರುವ ಬಜೆಟ್ ಆಗಿದೆ. ಸಮಸ್ಯೆ ಬಗೆಹರಿಸುವ ಮತ್ತು ಸೂಕ್ತ ಪರಿಹಾರ ಕಂಡುಕೊಂಡು ಅಭಿವೃದ್ಧಿ ಯೋಜನೆ ರೂಪಿಸುವ ಉದ್ದೇಶವೂ ಇಲ್ಲ. ಓಲೈಸುವ ಕೆಲಸ ಮಾಡಲಾಗಿದೆ.
-ಎಣ್ಣೆಗೆರೆ ಆರ್. ವೆಂಕಟರಾಮಯ್ಯ, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ
ಹಣವೇ ಇಲ್ಲ ಎಂದ ಮೇಲೆ ಬಿ.ಎಸ್ ಯಡಿಯೂರಪ್ಪ ಬಜೆಟ್‌ನಲ್ಲಿನ ಯೋಜನೆಗಳನ್ನು ಹೇಗೆ ಪೂರೈಸುತ್ತಾರೆ. ಇನ್ನು ಈ ಬಜೆಟ್‌ನಲ್ಲಿ ಹೊಸ ಯೋಜನೆ ಎಂದು ಯಾವುದೂ ಇಲ್ಲ, ಹಳೆಯ ಯೋಜನೆಗಳನ್ನೇ ಮುಂದುವರೆಸಲಾಗಿದೆ. ರೈತರಿಗೆ ಈ ಬಜೆಟ್‌ನಲ್ಲಿ ಅನ್ಯಾಯ ಮಾಡಲಾಗಿದೆ. ಇದೊಂದು ಸತ್ವ ಇಲ್ಲದ ಅನವಶ್ಯಕ ಮತ್ತು ನೀರಸ ಬಜೆಟ್.
-ಎಂ.ಬಿ. ಪಾಟೀಲ್, ಮಾಜಿ ಸಚಿವ
ವಿಶ್ವಗುರು ಬಸವಣ್ಣನವರ ಭವ್ಯವಾದ ಪುತ್ಥಳಿ ನಿರ್ಮಾಣ ಕಾರ್ಯ ಇನ್ನು ತ್ವರಿಗತಿಯಲ್ಲಿ ನಡೆಯಲೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 2020ರ ಬಜೆಟ್‌ನಲ್ಲಿ ಪುತ್ಥಳಿ ನಿರ್ಮಾಣ ಯೋಜನೆಗೆ 20 ಕೋಟಿ ರೂ.ಗಳನ್ನು ನೀಡಿರುವುದು ಸಂತಸ ತಂದಿದೆ.
-ಡಾ. ಶಿವಮೂರ್ತಿ ಮುರುಘಾ ಶರಣರು, ಚಿತ್ರದುರ್ಗ
ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ 32,259 ಕೋಟಿ ರೂ. ಮೀಸಲಾಗಿರುವುದು, ಏತ ನೀರಾವರಿ ಯೋಜನೆಗಳಿಗೆ 5 ಸಾವಿರ ಕೋಟಿ ರೂ.ಎತ್ತಿನಹೊಳೆ ಯೋಜನೆಗೆ 1,500 ಕೋಟಿ ರೂ., ಮಹಾದಾಯಿ ಯೋಜನೆಗೆ 500 ಕೋಟಿ ರೂ. ಮೀಸಲಾಗಿರುವುದು ಸ್ವಾಗತಾರ್ಹ, ಕೃಷಿ ಉಪಕರಣಗಳ ಸಾಲದ ಮೇಲಿನ ಸುಸ್ತಿ ಬಡ್ಡಿ ಮನ್ನಾ ಮಾಡಿರುವುದು ಒಳ್ಳೆಯ ಬೆಳವಣಿಗೆ, ಕೃಷಿ ಕ್ಷೇತ್ರಕ್ಕೆ ಮೀಸಲಿಟ್ಟಿರುವ ಹಣದಯೋಜನೆಗಳು ಜಾರಿಯಾದಾಗ ಮಾತ್ರ ಸಾರ್ಥಕವಾಗುತ್ತದೆ ಇಲ್ಲದಿದ್ದರೆ ಹುಸಿ ಬಜೆಟ್ ಆಗುತ್ತದೆ.
-ಕುರುಬೂರು ಶಾಂತಕುಮಾರ್, ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ
ಬಜೆಟ್‌ನಲ್ಲಿ ಸರಕಾರ ದುಡಿಮೆಗೆ ಅವಕಾಶ ಕೊಡುವ ಮೊದಲೇ ತೆರಿಗೆ ವಸೂಲಿ ಮಾಡುವ ಕೆಲಸ ಮಾಡಿದೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕಳೆದ ಹಲವಾರು ವರ್ಷಗಳಿಂದ ಕೊಡದೆ ಉಳಿದಿರುವ ಪ್ರೋತ್ಸಾಹ ಈ ವರ್ಷ ಕೊಟ್ಟು, ಪಾರಂಪರಿಕ ಪ್ರವಾಸಿ ಸ್ಥಳಗಳಿಗೆ, ಪ್ರತಿಮೆಗಳನ್ನ ಸ್ಥಾಪನೆ ಮಾಡವ ಮೂಲಕ, ಪ್ರವಾಸಿ ಸ್ಥಳಗಳನ್ನು ಸರ್ಕ್ಯೂಟ್ ನಿರ್ಮಾಣ ಮಾಡುವ ಮೂಲಕ ಉದ್ಯಮಕ್ಕೆ ಉತ್ತೇಜನ ಕೊಡುವ ಮೂಲಕ ಉದ್ಯೋಗ ಸೃಷ್ಟಿ ಮಾಡುವ ಕೆಲಸಕ್ಕೆ ಹೊರಟಿದೆ.
-ಕೆ. ರಾಧಾಕೃಷ್ಣ ಹೊಳ್ಳ, ರಾಜ್ಯ ಟ್ರವಲ್ ಒಪೆರೆಟರ್ ಸಂಘದ ಅಧ್ಯಕ್ಷ
ಬಜೆಟ್ ಸರಕಾರದ ಆರ್ಥಿಕ ದಿವಾಳಿಕೋರತನವನ್ನು ಸಂಪೂರ್ಣವಾಗಿ ಪ್ರತಿಫಲಿಸಿದೆ. ಇದೊಂದು ಅಕೌಂಟೆಂಟ್ ಕೊಟ್ಟಿರುವ ಲೆಕ್ಕಪತ್ರಗಳ ವಿವರಗಳಂತಿವೆ. ರಾಜ್ಯದ ಕೈಗಾರಿಕಾ ಬೆಳವಣಿಗೆ, ಉದ್ಯೋಗ ಸೃಷ್ಟಿ, ರೈತರ ಮೂಲಭೂತ ಬೇಡಿಕೆಗಳು, ದುಡಿಯುವ, ಶ್ರಮಿಕರ ಹಾಗೂ ಶ್ರೀಸಾಮಾನ್ಯರ ಬದಕನ್ನು ಉತ್ತಮಗೊಳಿಸುವ ಮುನ್ನೋಟ ಬಜೆಟ್‌ನಲ್ಲಿ ಇಲ್ಲ.
-ವಿಜಯ್ ಭಾಸ್ಕರ್, ಎಐಟಿಯುಸಿ ಪ್ರಧಾನ ಕಾರ್ಯದರ್ಶಿ
ಆರ್ಥಿಕ ಒತ್ತಡದ ಮಧ್ಯೆಯೂ ಯಡಿಯೂರಪ್ಪ ಅವರು ಚೆನ್ನಾಗಿ ಬಜೆಟ್ ಕೊಟ್ಟಿದ್ದಾರೆ. ಆದರೆ, ಮೇಕೆದಾಟು ಬಗ್ಗೆ ಪ್ರಸ್ತಾಪ ಮಾಡದೇ ಇದ್ದಿದ್ದು ಬೇಸರ ತಂದಿದೆ.
-ಶರತ್ ಬಚ್ಚೇಗೌಡ, ಶಾಸಕ
ಬಜೆಟ್‌ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಸಿಎಂ ಸೆಡ್ಡು ಹೊಡೆದಿದ್ದಾರೆ. ಅಂದು ಎತ್ತಿನಹೊಳೆ ಯೋಜನೆ ವಿರೋಧಿಸಿ ಪ್ರತಿಭಟಿಸಿದ್ದ ನಳಿನ್ ಕುಮಾರ್ ಕಟೀಲ್ ಇಂದು ಬಿಜೆಪಿ ರಾಜ್ಯಾಧ್ಯಕ್ಷರಾಗಿರುವಾಗ ಬಜೆಟ್‌ನಲ್ಲಿ ಯೋಜನೆಗೆ ಬಂಪರ್ ಕೊಡುಗೆ ಕೊಟ್ಟಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಳೀನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲೇ ಹಲವು ನೇತ್ರಾವತಿ ತಿರುವು ವಿರುದ್ಧ ಸಾಕಷ್ಟು ಹೋರಾಟಗಳು ನಡೆದಿತ್ತು. ಅದು ಯಡಿಯೂರಪ್ಪನವರಿಗೆ ಗೊತ್ತಿತ್ತು. ಈಗ ಸಮಯ ಬಳಸಿಕೊಂಡು ತನ್ನ ರಾಜ್ಯಾಧ್ಯಕ್ಷರಿಗೆ ಸಿಎಂ ಯಡಿಯೂರಪ್ಪ ನೇರ ಸೆಡ್ಡು ಹೊಡೆದಿದ್ದಾರೆ. ಎತ್ತಿನಹೊಳೆ ಯೋಜನೆಗೆ 1,500 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ.
-ವಿನಯಕುಮಾರ್ ಸೊರಕೆ, ಮಾಜಿ ಸಚಿವ
ಅಂಗನವಾಡಿ, ಬಿಸಿಯೂಟ ಮತ್ತು ಆಶಾ ಯೋಜನೆಗಳಲ್ಲಿ ಸುಮಾರು 3 ಲಕ್ಷ ಮಹಿಳೆಯರು ದುಡಿಯುತಿದ್ದಾರೆ. ಅವರೆಲ್ಲ ಗೌರವ ಧನಕ್ಕಿಂತ ಕಡಿಮೆ ಕೂಲಿಗೆ ದುಡಿಯುತಿದ್ದಾರೆ. ಅವರೆಲ್ಲ ಸಾಮೂಹಿಕವಾಗಿ ಬೆಂಗಳೂರಿಗೆ ಬಂದು ಬೇಡಿಕೆಗಳನ್ನು ಮಂಡಿಸಿದ್ದರೂ ಪ್ರಸ್ತುತ ಬಜೆಟ್‌ನಲ್ಲಿ ಅವರಿಗೆ ಯಾವುದೇ ನ್ಯಾಯ ಸಿಕ್ಕಿಲ್ಲ.
-ಸಾತಿ ಸುಂದರೇಶ್, ಸಿಪಿಐ ರಾಜ್ಯ ಕಾರ್ಯದರ್ಶಿ
ಇಂದಿನ ಆಯವ್ಯಯದಲ್ಲಿ ಸಣ್ಣ ಕೈಗಾರಿಕೆಗಳಿಗೆ ಅಷ್ಟಾಗಿ ಉತ್ತೇಜನ ನೀಡದಿದ್ದರೂ ರಾಜ್ಯದ ಪ್ರಗತಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಒತ್ತು ನೀಡಿದ್ದಾರೆ. ಅದರಲ್ಲೂ ರೈತರಿಗೆ ಅನುಕೂಲ ಕಲ್ಪಿಸಿರುವುದು ಸಮಾಧಾನ ತಂದಿದೆ.
-ರಾಜು, ಕರ್ನಾಟಕ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ
ರಾಜ್ಯ ಬಿಜೆಪಿ ಸರಕಾರ ಈ ಬಜೆಟ್‌ನಲ್ಲಿ ಕೇವಲ 29,786 ಕೋಟಿ ರೂ.(ಶೇ.11) ಹಣ ಮೀಸಲಿಡುವ ಮೂಲಕ ತನ್ನ ಶಿಕ್ಷಣ ವಿರೋಧಿ, ವಿದ್ಯಾರ್ಥಿ ದ್ರೋಹಿ ನೀತಿಯನ್ನು ಮುಂದುವರೆಸಿದೆ. ಕಳೆದ ವರ್ಷದ ಬಜೆಟ್‌ಗೆ ಹೋಲಿಸಿದರೆ ಈ ಬಾರಿ ಅನುದಾನವನ್ನು ಕಡಿತ ಮಾಡಿರುವುದು ಸಲ್ಲ. ಮಠಗಳಿಗೆ, ಜಾತಿವಾರು ಪ್ರತಿಮೆಗಳಿಗೆ ಸಾವಿರಾರು ಕೋಟಿ ನೀಡಿ, ಶಿಕ್ಷಣಕ್ಕೆ ಹಣ ಕಡಿತ ಮಾಡಲಾಗಿದೆ. ಈ ಸರಕಾರಕ್ಕೆ ಶಿಕ್ಷಣ ವ್ಯವಸ್ಥೆಯ ಸಮಗ್ರ ಅಭಿವೃದ್ಧಿಯ ಬಗ್ಗೆ ಯಾವುದೇ ದೂರದೃಷ್ಟಿಕೋನ ಮತ್ತು ಅಭಿವೃದ್ಧಿ ಕಣ್ಣೋಟ ಇಲ್ಲ.
-ಅಮರೇಶ್ ಕಡಗದ, ಎಸ್‌ಎಫ್‌ಐ ರಾಜ್ಯಾಧ್ಯಕ್ಷ
ರಾಜ್ಯವೂ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮಂಡಿಸಿರುವ ಬಜೆಟ್ ಮುಂದಿನ ದಿನಗಳಲ್ಲಿ ರಾಜ್ಯದ ಅಭಿವೃದ್ಧಿಗೆ ಟಾನಿಕ್‌ನಂತೆ ಕೆಲಸ ಮಾಡಲಿದೆ. ಹದಗೆಟ್ಟಿದ್ದ ಆರ್ಥಿಕತೆಗೆ ಚಿಕಿತ್ಸೆಯಾಗಲಿದೆ. ಸಮಗ್ರ ಕರ್ನಾಟಕದ ಅಭಿವದ್ಧಿಗೆ ಮುಂಗಡಪತ್ರ ವೇಗ ನೀಡಲಿದೆ. ನನೆಗುದಿಗೆ ಬಿದ್ದಿರುವ ಯೋಜನೆಗಳು ಕಾಲಮಿತಿಯೊಳಗೆ ಸಾಕಾರಗೊಳ್ಳಲಿವೆ. ಪ್ರಾದೇಶಿಕ ಸಮತೋಲನದ, ಅಭಿವೃದ್ಧಿ ಸಮತೋಲನದ ಸ್ಪಷ್ಟ ದಿಕ್ಸೂಚಿಯುಳ್ಳ ಬಜೆಟ್ ಇದಾಗಿದೆ. ಎಲ್ಲರಿಗೂ ಸಲ್ಲುವ ಬಜೆಟ್ ಆಗಿದೆ.
-ಡಾ.ಸಿ.ಎನ್.ಅಶ್ವಥ್ ನಾರಾಯಣ, ಉಪ ಮುಖ್ಯಮಂತ್ರಿ
ಯಡಿಯೂರಪ್ಪ ಮಂಡಿಸಿರುವ ಬಜೆಟ್ ನಿರಾಶಾದಾಯಕವಾಗಿದೆ. ಈ ಬಜೆಟ್ ಬೆಂಗಳೂರು ಕೇಂದ್ರೀಕೃತ ಬಜೆಟ್ ಆಗಿದ್ದು, ಉತ್ತರ ಕರ್ನಾಟಕ ಭಾಗದ ಜನರಿಗೆ ಇದರಿಂದ ಹೆಚ್ಚಿನ ಅನುಕೂಲವಾಗಿಲ್ಲ. ಕೃಷಿ, ಕೈಗಾರಿಕೆ ಹಾಗೂ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ವಿಫಲವಾಗಿದ್ದು, ಬಜೆಟ್ ತೀರಾ ನಿರಾಶಾದಾಯಕವಾಗಿದೆ.
-ವಸಂತ ಲದವಾ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಮಾಜಿ ಅಧ್ಯಕ್ಷ







