ದಿಲ್ಲಿ ಹೈಕೋರ್ಟ್ ನಿಂದ ವರ್ಗಾವಣೆ ಬಗ್ಗೆ ಪ್ರತಿಕ್ರಿಯಿಸಿದ ನ್ಯಾ. ಮುರಳೀಧರ್

ಹೊಸದಿಲ್ಲಿ,ಮಾ.5: ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿರುವ ನ್ಯಾ.ಎಸ್.ಮುರಳೀಧರ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಗುರುವಾರ ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ನಡೆದಿದ್ದು,ಈ ಸಂದರ್ಭದಲ್ಲಿ ಅವರನ್ನು ‘ಕೊಹಿನೂರ್’ ಎಂದು ವಕೀಲರು ಬಣ್ಣಿಸಿದರು.
ದಿಲ್ಲಿ ಹಿಂಸಾಚಾರದ ಕುರಿತು ವಿಚಾರಣೆ ಸಂದರ್ಭದಲ್ಲಿ ನ್ಯಾ.ಮುರಳೀಧರ ಅವರು ಪೊಲೀಸರನ್ನು ಕಟುವಾಗಿ ಟೀಕಿಸಿದ್ದ ಬೆನ್ನಿಗೇ ಕೇಂದ್ರ ಸರಕಾರವು ಅವರನ್ನು ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯಕ್ಕೆ ವರ್ಗಾವಣೆಗೊಳಿಸಿ ಆದೇಶಿಸಿತ್ತು. ಇದು ರಾಜಕೀಯ ವಿವಾದವನ್ನು ಸೃಷ್ಟಿಸಿತ್ತು.
ಜ.26ರಂದು ವರ್ಗಾವಣೆ ಆದೇಶ ಹೊರಡಿಸಿದ್ದ ಸರಕಾರವು,ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂ ಫೆ.12ರಂದು ಮಾಡಿದ್ದ ಶಿಫಾರಸಿನಂತೆ ಮುರಳೀಧರ ಅವರನ್ನು ವರ್ಗ ಮಾಡಲಾಗಿದೆ ಮತ್ತು ಇದಕ್ಕೆ ಅವರ ಒಪ್ಪಿಗೆಯನ್ನು ಪಡೆಯಲಾಗಿದೆ ಎಂದು ತಿಳಿಸಿತ್ತು. ಆದರೆ ವರ್ಗಾವಣೆಯ ಸಮಯವು ಪ್ರಶ್ನೆಗಳನ್ನು ಹುಟ್ಟಿಸಿತ್ತು.
“ಕಾನೂನಿನ ಯಾವುದೇ ವಿಷಯವನ್ನು ಚರ್ಚಿಸಬಲ್ಲ ಮತ್ತು ಯಾವುದೇ ವಿಷಯವನ್ನು ನಿರ್ಧರಿಸಬಲ್ಲ ಶ್ರೇಷ್ಠ ನ್ಯಾಯಾಧೀಶರನ್ನು ನಾವು ಕಳೆದುಕೊಳ್ಳುತ್ತಿದ್ದೇವೆ” ಎಂದು ದಿಲ್ಲಿ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಡಿ.ಎನ್.ಪಟೇಲ್ ಹೇಳಿದರೆ, ದಿಲ್ಲಿ ಉಚ್ಚ ನ್ಯಾಯಾಲಯದ ವಕೀಲರ ಸಂಘದ ಕಾರ್ಯದರ್ಶಿ ಅಭಿಜಾತ ಅವರು,:”ಉಚ್ಚ ನ್ಯಾಯಾಲಯದ ‘ಕೊಹಿನೂರ್’ ನಮ್ಮಿಂದ ಕೆಲವು ನೂರು ಕಿ.ಮೀ.ದೂರಕ್ಕೆ ತೆರಳುತ್ತಿದ್ದಾರೆ” ಎಂದರು.
“ನ್ಯಾಯವು ಗೆಲ್ಲಬೇಕಿದ್ದರೆ ಅದು ಗೆಲ್ಲುತ್ತದೆ. ಸತ್ಯಕ್ಕೆ ಅಂಟಿಕೊಂಡರೆ ನ್ಯಾಯ ಸಿಕ್ಕೇ ಸಿಗುತ್ತದೆ” ಎಂದ ನ್ಯಾ.ಮುರಳೀಧರ, ಭಾರತದ ಮುಖ್ಯ ನ್ಯಾಯಾಧೀಶ ಎಸ್.ಎ.ಬೊಬ್ಡೆ ಅವರು ತನ್ನ ವರ್ಗಾವಣೆಯ ಕುರಿತು ಫೆ.17ರಂದು ಮಾಹಿತಿ ನೀಡಿದ್ದರು ಹಾಗೂ ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯಕ್ಕೆ ತೆರಳಲು ತನಗೇನೂ ಸಮಸ್ಯೆಯಿಲ್ಲ ಎಂದು ತಾನು ಹೇಳಿದ್ದೆ ಎಂದು ತಿಳಿಸಿದರು.







