ಕೇಂದ್ರದ ಅನುದಾನ ಕಡಿತ, ಮುಚ್ಚುಮರೆ ಇಲ್ಲದೆ ಹೇಳುತ್ತೇನೆ: ಸಿಎಂ ಯಡಿಯೂರಪ್ಪ

ಬೆಂಗಳೂರು,ಮಾ. 5: ಆರ್ಥಿಕ ಕುಸಿತ, ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿದ್ದ ಅನುದಾನ ಕಡಿತ, ಜಿಎಸ್ಟಿ ನಷ್ಟ ಪರಿಹಾರ ನೀಡಿಕೆಯಲ್ಲಿ ಕೊರತೆ ಹಾಗೂ ನಿರೀಕ್ಷಿತ ಪ್ರಮಾಣದಲ್ಲಿ ಸಂಪನ್ಮೂಲ ಕ್ರೋಡೀಕರಣ ಆಗಿಲ್ಲ ಎಂಬುದು ಸೇರಿದಂತೆ ಎಲ್ಲವನ್ನು ಸ್ಪಷ್ಟಪಡಿಸಿದ್ದು, ಯಾವುದೇ ಮುಚ್ಚುಮರೆ ಇಲ್ಲ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ಅನುದಾನ ಕಡಿತ ಮತ್ತು ಸಂಪನ್ಮೂಲ ಕೊರತೆಗಳ ನಡುವೆಯೂ 2.37 ಲಕ್ಷ ಕೋಟಿ ರೂ.ಗಳ ಬಜೆಟ್ ಮಂಡಿಸಿದ್ದು, ನಷ್ಟ ಸರಿದೂಗಿಸಲು ಸ್ವಲ್ಪ ಪ್ರಮಾಣದ ತೆರಿಗೆ ಹೊರೆ ಹಾಕುವುದು ಅನಿವಾರ್ಯವಾಗಿತ್ತು. ಆ ಹಿನ್ನೆಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಏರಿಕೆ ಮಾಡಲಾಗಿದೆ ಎಂದು ಸಮರ್ಥನೆ ನೀಡಿದರು.
2020-21ನೆ ಸಾಲಿಗೆ ರಾಜ್ಯದ ಸ್ವಂತ ತೆರಿಗೆ ರಾಜಸ್ವ 2019-20ನೆ ಸಾಲಿನ ಪರಿಷ್ಕೃತ ಅಂದಾಜು ಮೀರಿ ಜಿಎಸ್ಪಿ ನಷ್ಟ ಪರಿಹಾರ ಒಳಗೊಂಡಂತೆ ಶೇ.7.66ರ ಹೆಚ್ಚಳದೊಂದಿಗೆ 1,28,107 ಕೋಟಿ ರೂ.ಗಳಾಗುತ್ತದೆ ಎಂದು ಅಂದಾಜು ಮಾಡಲಾಗಿದೆ. ತೆರಿಗೆಯೇತರ ರಾಜಸ್ವಗಳಿಂದ 7,767 ಕೋಟಿ ರೂ.ಗಳನ್ನು ಸಂಗ್ರಹಿಸಬಹುದೆಂದು ನಿರೀಕ್ಷಿಸಲಾಗಿದೆ. ಕೇಂದ್ರದ ತೆರಿಗೆಯ ಪಾಲಿನ ರೂಪದಲ್ಲಿ 28,591 ಕೋಟಿ ರೂ. ಗಳನ್ನು ಹಾಗೂ 15,454 ಕೋಟಿ ರೂ.ಗಳನ್ನು ಕೇಂದ್ರ ಸರಕಾರದಿಂದ ಸಹಾಯ ಅನುದಾನ ರೂಪದಲ್ಲಿ ರಾಜ್ಯ ಸರಕಾರ ನಿರೀಕ್ಷಿಸಿದೆ ಎಂದು ಹೇಳಿದರು.
2019-20ನೆ ಸಾಲಿನಲ್ಲಿ ಕೇಂದ್ರದಿಂದ ಬರಬೇಕಿದ್ದ ಸುಮಾರು 11 ಸಾವಿರ ಕೋಟಿ ರೂ.ಗಳಷ್ಟು ಅನುದಾನ ರಾಜ್ಯಕ್ಕೆ ಬಂದಿಲ್ಲ. ಅಲ್ಲದೆ, ಜಿಎಸ್ಪಿ ನಷ್ಟ ಪರಿಹಾರ ಮೊತ್ತವನ್ನು ಹೆಚ್ಚಳ ಮಾಡುವುದು ಸೇರಿದಂತೆ 15ನೆ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಬರಬೇಕಿರುವ ಅನುದಾನ ನೀಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.
ಪರಿಶಿಷ್ಟರ ಕಲ್ಯಾಣಕ್ಕೆ ಎಸ್ಸಿಪಿ-ಟಿಎಸ್ಪಿ ಯೋಜನೆಯಡಿ 26,930 ಕೋಟಿ ರೂ. ಮೀಸಲಿಟ್ಟಿರುವುದು ನಮ್ಮ ಬದ್ಧತೆಗೆ ಸಾಕ್ಷಿ. ನೆರೆ ಸಂತ್ರಸ್ತರಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದ್ದೇನೆ ಎಂದ ಅವರು, ಕೇಂದ್ರದ ಅನುದಾನ ಕಡಿತ, ಜಿಎಸ್ಪಿ ನಷ್ಟ ಪರಿಹಾರ ಸಂಬಂಧ ಮಾ.13ಕ್ಕೆ 15ನೆ ಹಣಕಾಸು ಆಯೋಗದ ಸಭೆ ದಿಲ್ಲಿಯಲ್ಲಿದ್ದು, ಈ ವೇಳೆ ರಾಜ್ಯಕ್ಕೆ ಆಗಿರುವ ಅನ್ಯಾಯ ಸರಿಪಡಿಸಲು ಮನವಿ ಮಾಡಲಾಗುವುದು ಎಂದರು.







