ಆಧುನಿಕ ಕರಾವಳಿ ಮೀನು ರಫ್ತು ಸ್ಥಾವರ ಸ್ಥಾಪನೆ: ಯಡಿಯೂರಪ್ಪ
ರಾಜ್ಯ ಬಜೆಟ್

ಬೆಂಗಳೂರು, ಮಾ.5: ಮಂಗಳೂರು ತಾಲೂಕು ಕುಳಾಯಿಯಲ್ಲಿ ನಿರ್ಮಿಸಲಾಗುತ್ತಿರುವ ಹೊಸ ಮೀನುಗಾರಿಕೆ ಬಂದರಿನಲ್ಲಿ 12.5 ಕೋಟಿ ರೂ. ವೆಚ್ಚದಲ್ಲಿ ಆಧುನಿಕ ಕರಾವಳಿ ಮೀನು ರಫ್ತು ಸ್ಥಾವರ ಸ್ಥಾಪನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ.
ಗುರುವಾರ ವಿಧಾನಸಭೆಯಲ್ಲಿ ಬಜೆಟ್ ಮಂಡಿಸಿದ ಅವರು, ಮಂಗಳೂರು ಪ್ರದೇಶದಲ್ಲಿ ರಫ್ತು ವಹಿವಾಟು ಹೆಚ್ಚಿಸುವ ಉದ್ದೇಶದಿಂದ ಆಧುನಿಕ ಕರಾವಳಿ ಮೀನು ರಫ್ತು ಸ್ಥಾವರ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
'ಭಾಗ್ಯಲಕ್ಷ್ಮಿ ಯೋಜನೆ, ಶಾಲಾ ಮಕ್ಕಳಿಗೆ ಬೈಸಿಕಲ್ ಯೋಜನೆ ಸೇರಿದಂತೆ ನಾಡಿನ ಜನರ ಶ್ರೇಯೋಭಿವೃದ್ಧಿಗಾಗಿ ಜಾರಿಯಲ್ಲಿರುವ ಪ್ರಮುಖ ಯೋಜನೆಗಳನ್ನು ಮುಂದುವರೆಸಲಾಗುವುದು. ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ವಿವಿಧ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕಿದೆ. ಇದನ್ನು ಮನಗಂಡು, ನಾನು ಈ ಆಯವ್ಯಯವನ್ನು ಇಲಾಖಾವಾರು ವಿಂಗಡಿಸದೇ ಆರು ವಲಯಗಳನ್ನಾಗಿ ವಿಂಗಡಿಸಿ ಮಂಡಿಸುತ್ತಿದ್ದೇನೆ.
-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ
ರಾಜ್ಯದಲ್ಲಿ ಆರ್ಥಿಕ ಸಂಕಷ್ಟ
15ನೆ ಹಣಕಾಸು ಆಯೋಗದ ವರದಿ ಪ್ರಕಾರ ಕೇಂದ್ರದ ತೆರಿಗೆಯಲ್ಲಿ ರಾಜ್ಯದ ಪಾಲು ಕಡಿತವಾಗಿರುವುದು ಹಾಗೂ ಮತ್ತಿತರ ಬೆಳವಣಿಗೆಗಳಿಂದ ರಾಜ್ಯದ ಸಂಪನ್ಮೂಲ ಕ್ರೋಡೀಕರಣದಲ್ಲಿ ತೀವ್ರ ಸಂಕಷ್ಟಗಳು ಎದುರಾಗಿವೆ. ನಮ್ಮ ರಾಜ್ಯವು ಈ ಪ್ರಮಾಣದ ಆರ್ಥಿಕ ಸಂಕಷ್ಟಗಳನ್ನು ಹಿಂದಿನ ಯಾವುದೇ ವರ್ಷಗಳಲ್ಲಿ ಎದುರಿಸಿರುವುದಿಲ್ಲ.
-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ





