ಕೊರೋನ ಬಾಧಿತರಿಗೆ ವೇತನ ಸಹಿತ 28 ದಿನ ರಜೆ ನೀಡಿ: ರಾಜ್ಯ ಕಾರ್ಮಿಕ ಇಲಾಖೆ ಸುತ್ತೋಲೆ

ಸಾಂದರ್ಭಿಕ ಚಿತ್ರ
ಬೆಂಗಳೂರು, ಮಾ.5: ರಾಜ್ಯದಲ್ಲಿ ಯಾವುದೇ ಕಾರ್ಮಿಕ ಅಥವಾ ಉದ್ಯೋಗಿ ಕೊರೋನ ಸೋಂಕಿಗೆ ಒಳಗಾದರೆ, ಆತನಿಗೆ 28 ದಿನಗಳ ವೇತನ ಸಹಿತ ರಜೆ ನೀಡಬೇಕು ಎಂದು ರಾಜ್ಯ ಕಾರ್ಮಿಕ ಇಲಾಖೆ ಸುತ್ತೋಲೆ ಹೊರಡಿಸಿದೆ.
ಕೊರೋನ ವೈರಸ್ ಬಾಧಿತರಿಗೆ 28 ದಿನಗಳ ರಜೆಯ ಅಗತ್ಯವಿರುವುದರಿಂದ, ಇಎಸ್ಐ ಕಾಯ್ದೆ ಅನ್ವಯವಾಗುವ ಸಂಸ್ಥೆಗಳ ಕಾರ್ಮಿಕರು, ತಮ್ಮ ಹತ್ತಿರದ ಇಎಸ್ಐ ಔಷಧಾಲಯ, ಆಸ್ಪತ್ರೆಗಳಿಗೆ ತೆರಳಿ, ಸದರಿ ಆಸ್ಪತ್ರೆಗಳಲ್ಲಿನ ವೈದ್ಯಾಧಿಕಾರಿಗಳಿಂದ ಪ್ರಮಾಣ ಪತ್ರವನ್ನು ಪಡೆಯಬೇಕು.
ಪ್ರಮಾಣ ಪತ್ರ ಪಡೆಯಲು ಬರುವ ಕೊರೋನ ಬಾಧಿತ ಕಾರ್ಮಿಕರಿಗೆ ಎಲ್ಲಾ ಇಎಸ್ಐ ವೈದ್ಯಾಧಿಕಾರಿಗಳು ತುರ್ತಾಗಿ ಪರಿಶೀಲನೆ ನಡೆಸಿ ಕಡ್ಡಾಯವಾಗಿ ಪ್ರಮಾಣಪತ್ರ ನೀಡಬೇಕು. ಕೊರೋನ ಬಾಧಿತರು ಇಎಸ್ಐನಿಂದ ನೀಡಲ್ಪಟ್ಟ ಪ್ರಮಾಣಪತ್ರವನ್ನು ತಮ್ಮ ಸಂಸ್ಥೆಯ ಆಡಳಿತವರ್ಗಕ್ಕೆ ಸಲ್ಲಿಸಿದ ತಕ್ಷಣ 28 ದಿನಗಳ ರಜೆಯನ್ನು ಕಡ್ಡಾಯವಾಗಿ ಮಂಜೂರು ಮಾಡಬೇಕು. ಇಎಸ್ಐ ಕಾಯ್ದೆ ಅನ್ವಯವಾಗದಿರುವ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ನೌಕರರು ಕೊರೋನ ವೈರಸ್ ಬಾಧಿತರಾದಲ್ಲಿ, ಅವರಿಗೆ ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಲಂ 15(3) ಅನ್ವಯ 28 ದಿನಗಳ ವೇತನ ಸಹಿತ ಅನಾರೋಗ್ಯದ ರಜೆ ಮತ್ತು ಇತರೆ ರಜೆಯನ್ನು ಕಡ್ಡಾಯವಾಗಿ ಮಂಜೂರು ಮಾಡಬೇಕು ಎಂದು ರಾಜ್ಯ ಕಾರ್ಮಿಕ ಇಲಾಖೆ ಪ್ರಕಟನೆಯ ಮೂಲಕ ಆದೇಶಿಸಿದೆ.





