'ಪಾಕಿಸ್ತಾನ ಝಿಂದಾಬಾದ್' ಘೋಷಣೆ ಪ್ರಕರಣ: ಆರೋಪಿಗಳ ಜಾಮೀನು ತೀರ್ಪು ಕಾಯ್ದಿರಿಸಿದ ಕೋರ್ಟ್

ಹುಬ್ಬಳ್ಳಿ, ಮಾ.5: ಪಾಕಿಸ್ತಾನ ಝಿಂದಾಬಾದ್ ಘೋಷಣೆ ಕೂಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಕೆಎಲ್‌ಇ ಇಂಜಿನಿಯರಿಂಗ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹುಬ್ಬಳ್ಳಿಯ 5ನೆ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಾ.9ಕ್ಕೆ ತೀರ್ಪು ಕಾಯ್ದಿರಿಸಿದೆ.
ಜಾಮೀನು ಅರ್ಜಿ ವಿಚಾರಣೆ ನ್ಯಾಯಾಧೀಶ ಕೆ.ಎನ್.ಗಂಗಾಧರ್ ಅವರಿದ್ದ ನ್ಯಾಯಪೀಠದಲ್ಲಿ ನಡೆಯಿತು. ಕೆಲಕಾಲ ವಕೀಲರ ವಾದ ಆಲಿಸಿದ ನ್ಯಾಯಪೀಠವು ಜಾಮೀನು ಅರ್ಜಿಯ ತೀರ್ಪುನ್ನು ಮಾ.9ಕ್ಕೆ ಕಾಯ್ದಿರಿಸಿತು.
ಹುಬ್ಬಳ್ಳಿ ನಗರದಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಆಮಿರ್, ಬಾಸಿತ್ ಮತ್ತು ತಾಲಿಬ್ 'ಪಾಕಿಸ್ತಾನ ಝಿಂದಾಬಾದ್' ಘೋಷಣೆ ಕೂಗಿದ್ದರು. ಜಿಲ್ಲಾ ನ್ಯಾಯಾಲಯ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಮಾ.7ರವರೆಗೆ ವಿಸ್ತರಿಸಿತ್ತು. ಆರೋಪಿಗಳ ಪರ ಜಾಮೀನು ಅರ್ಜಿ ಸಲ್ಲಿಸಲು ಜಿಲ್ಲಾ ನ್ಯಾಯಾಲಯಕ್ಕೆ ಹೈಕೋರ್ಟ್ ವಕೀಲೆ ಮೈತ್ರಿಯಾ ಕೃಷ್ಣನ್ ನೇತೃತ್ವದ 7 ಜನರ ವಕೀಲರ ತಂಡವು ಗುರುವಾರ ಬೆಂಗಳೂರಿನಿಂದ ಹುಬ್ಬಳ್ಳಿಗೆ ಆಗಮಿಸಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಸುತ್ತಮುತ್ತ ಬೀಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.







