ದಿಲ್ಲಿ ಹಿಂಸಾಚಾರದಲ್ಲಿ 102 ಜನರಿಗೆ ಗುಂಡೇಟು

ಹೊಸದಿಲ್ಲಿ, ಮಾ.5: ದಿಲ್ಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಕನಿಷ್ಟ 102 ಜನರಿಗೆ ಗುಂಡಿನ ಗಾಯವಾಗಿದ್ದು, 172 ಜನರಿಗೆ ಹರಿತವಾದ ಆಯುಧ ಅಥವಾ ಕಲ್ಲೇಟಿನಿಂದ ಗಾಯವಾಗಿದೆ. ಗಾಯಾಳುಗಳಲ್ಲಿ ಹೆಚ್ಚಿನವರು ಯುವಕರು ಎಂದು ದಿಲ್ಲಿ ಪೊಲೀಸರು ಸರಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ದೃಢಪಡಿಸಿದ್ದಾರೆ.
ಹಿಂಸಾಚಾರಕ್ಕೆ ಬಲಿಯಾದ 47 ಜನರಲ್ಲಿ ಎಷ್ಟು ಮಂದಿ ಗುಂಡೇಟಿನಿಂದ ಮೃತರಾಗಿದ್ದಾರೆ ಎಂದು ವೈದ್ಯರು ಇನ್ನೂ ದೃಢಪಡಿಸಿಲ್ಲ. ಆದರೆ 20ಕ್ಕೂ ಹೆಚ್ಚು ಮಂದಿ ಗುಂಡೇಟಿನಿಂದ ಮೃತಪಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ. ಈಶಾನ್ಯ ದಿಲ್ಲಿಯ ಹಲವೆಡೆ ಹಿಂಸಾಚಾರ ಉಲ್ಬಣವಾಗಿದ್ದ ಫೆಬ್ರವರಿ 22ರಿಂದ 29ರವರೆಗಿನ ಅವಧಿಯಲ್ಲಿ ಪೊಲೀಸ್ ಕಂಟ್ರೋಲ್ ರೂಂಗೆ ಸಹಾಯ ಕೋರಿ ಸುಮಾರು 22,000 ಕರೆಗಳು ಬಂದಿವೆ. ಫೆ.24ರಿಂದ 25ರ ಮಧ್ಯೆ ಸುಮಾರು 13,000 ಕರೆಗಳು ಬಂದಿವೆ. ಮರುದಿನ ಸುಮಾರು 6000 ಕರೆಗಳು ಬಂದಿವೆ. ಇದರಲ್ಲಿ ಗಾಬರಿಯಿಂದ ಮಾಡಿರುವ ಕರೆಗಳೇ ಹೆಚ್ಚಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಹಿಂಸಾಚಾರ ಸ್ಪೋಟಗೊಂಡ ಸಂದರ್ಭ ಸುಮಾರು 72 ಗಂಟೆಯ ಅವಧಿಯಲ್ಲಿ ತುರ್ತು ಸೇವೆ ಲಭ್ಯವಿರಲಿಲ್ಲ ಎಂದು ಹಿಂಸಾಚಾರ ನಡೆದ ಪ್ರದೇಶಗಳ ಹಿಂದು ಮತ್ತು ಮುಸ್ಲಿಮರು ದೂರಿರುವುದಾಗಿ ಸತ್ಯಶೋಧನಾ ಸಮಿತಿ ವರದಿ ಮಾಡಿದೆ. ದಿಲ್ಲಿ ಪೊಲೀಸರು ಅಗತ್ಯಬಿದ್ದಾಗ ಸ್ಥಳಕ್ಕೆ ಬರಲಿಲ್ಲ ಅಥವಾ ಕನಿಷ್ಟ ದೂರವಾಣಿ ಕರೆಯನ್ನೂ ಸ್ವೀಕರಿಸಿಲ್ಲ ಎಂದು ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿರುವುದಾಗಿ ಸತ್ಯಶೋಧನಾ ಸಮಿತಿ ತಿಳಿಸಿದೆ.
ಈ ಮಧ್ಯೆ, ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳ ತನಿಖೆ ನಡೆಸುತ್ತಿರುವ ಎರಡು ವಿಶೇಷ ತನಿಖಾ ತಂಡಗಳು, 47 ಹತ್ಯೆ ಪ್ರಕರಣಗಳ ತನಿಖೆಯಲ್ಲಿ ಯಾವುದೇ ಪ್ರಗತಿ ಸಾಧಿಸಿಲ್ಲ ಎಂದು ವರದಿಯಾಗಿದೆ.







