ಸಿಎಎ, ದಿಲ್ಲಿ ಹಿಂಸಾಚಾರ ಪ್ರಕರಣ: ಜಾಗತಿಕ ಟೀಕೆ ತಿರಸ್ಕರಿಸಿದ ಭಾರತ

ಹೊಸದಿಲ್ಲಿ, ಮಾ. 4: ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಹೊಸದಿಲ್ಲಿ ಕೋಮು ಹಿಂಸಾಚಾರ ಕುರಿತ ಟೀಕೆಯನ್ನು ಗುರುವಾರ ಮತ್ತೊಮ್ಮೆ ತಿರಸ್ಕರಿಸಿರುವ ಭಾರತ, ಈ ವಿಷಯದ ಕುರಿತು ಅಂತಾರಾಷ್ಟ್ರೀಯ ಸಂಸ್ಥೆಗಳು ಹಾಗೂ ವಿದೇಶಿ ನಾಯಕರು ಬೇಜವಾಬ್ದಾರಿಯುತ ಹೇಳಿಕೆ ನೀಡಬಾರದು ಎಂದಿದೆ.
ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ 40 ಜನರ ಸಾವಿಗೆ ಕಾರಣವಾದ ಹೊಸದಿಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿ ಭಾರತ ಸರಕಾರ ಕಳೆದ ಒಂದು ವಾರಗಳಿಂದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರಕ್ಕಿರುವ ಅಮೆರಿಕ ಆಯೋಗ (ಯುಎಸ್‌ಸಿಐಆರ್‌ಎಫ್)ದಂತಹ ಸಂಘಟನೆಗಳು ಹಾಗೂ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವರಿಷ್ಠೆ ಮಿಶೆಲ್ ಬೆಚೆಲೆಟ್ ಅವರಿಂದ ತೀವ್ರ ಟೀಕೆಗೆ ಗುರಿಯಾಗಿತ್ತು.
ಈ ಹಿಂದೆ ಟರ್ಕಿ, ಇರಾನ್ ಹಾಗೂ ಮಲೇಶ್ಯಾದಂತಹ ರಾಷ್ಟ್ರಗಳ ನಾಯಕರು ಈ ಎರಡು ವಿಚಾರಕ್ಕೆ ಸಂಬಂಧಿಸಿ ಭಾರತವನ್ನು ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಭಾರತ, ಇದು ದೇಶದ ಆಂತರಿಕ ವಿಷಯಗಳಿಗೆ ಸಂಬಂಧಿಸಿದ್ದು. ಯಾರೂ ಮಧ್ಯಪ್ರವೇಶಿಸುವ ಅಗತ್ಯ ಇಲ್ಲ ಎಂದು ಹೇಳಿತ್ತು. ಆದರೂ ಈ ದೇಶಗಳ ನಾಯಕರು ತಮ್ಮ ಟೀಕೆಯನ್ನು ಪುನರುಚ್ಚರಿಸಿದ್ದಾರೆ.
ದಿಲ್ಲಿಯಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ನಿರ್ದಿಷ್ಟ ಹೇಳಿಕೆ ನೀಡಿರುವುದನ್ನು ನಾವು ಕೇಳಿದ್ದೇವೆ. ಪರಿಸ್ಥಿತಿ ಬಹುಬೇಗ ಸಹಜ ಸ್ಥಿತಿಗೆ ಮರಳುತ್ತಿದೆ ಎಂದು ನಾವು ಈ ಸಂದರ್ಭ ತಿಳಿಸಲು ಬಯಸುತ್ತೇವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.







