ಸಮುದಾಯದ ಸಮಗ್ರ ಸಬಲೀಕರಣಕ್ಕಾಗಿ ಮುಸ್ಲಿಂ ಜಮಾಅತ್ ಕಾರ್ಯನಿರ್ವಹಣೆ: ಎನ್.ಕೆ.ಎಂ ಶಾಫಿ ಸಅದಿ

ತುಮಕೂರು, ಮಾ.5: ರಾಜ್ಯದ ಮುಸ್ಲಿಂ ಸಮುದಾಯದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಸಬಲೀಕರಣದ ಗುರಿಯೊಂದಿಗೆ ಅಸ್ತಿತ್ವಕ್ಕೆ ಬಂದಿರುವ ಕರ್ನಾಟಕ ಮುಸ್ಲಿಂ ಜಮಾಅತ್ ಸಂಘಟನೆಗೆ ಸದಸ್ಯತ್ವ ನೋಂದಣಿ ಆರಂಭಿಸಲಾಗಿದೆ ಎಂದು ಮುಸ್ಲಿಂ ಜಮಾಅತ್ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಎನ್.ಕೆ.ಎಂ ಶಾಫಿ ಸಅದಿ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಮುಸ್ಲಿಂ ಜಮಾಅತ್ ಸಂಘಟನೆಯು ಮುಸ್ಲಿಂ ಸಮುದಾಯದ ಸರ್ವತೋಮುಖ ಸಬಲೀಕರಣ, ನಾಯಕತ್ವದ ಸೃಷ್ಟಿ, ಕಾರ್ಯಕರ್ತರ ಬೃಹತ್ ತಂಡದ ರಚನೆ, ಸರಕಾರಿ ಸವಲತ್ತುಗಳನ್ನು ಅರ್ಹರಿಗೆ ತಲುಪಿಸುವ ವ್ಯವಸ್ಥೆ, ಸಮಾಜಕ್ಕಾಗುವ ಅನ್ಯಾಯವನ್ನು ಸರಕಾರದ ಮುಂದೆ ಅನಾವರಣಗೊಳಿಸುವುದು, ವಿವಿಧ ರಾಜಕೀಯ ಪಕ್ಷಗಳ ನಾಯಕರಲ್ಲಿ ಸಮುದಾಯಕ್ಕೆ ಸಲ್ಲಬೇಕಾದ ಸ್ಥಾನಮಾನಗಳನ್ನು ನೀಡುವಂತೆ ಒತ್ತಾಯಿಸುವುದು ಸೇರಿದಂತೆ ಮುಸ್ಲಿಂ ಸಮುದಾಯದ ಸಮಗ್ರ ಸಬಲೀಕರಣಕ್ಕೆ ಹಾಗೂ ಸಂವಿಧಾನದ ಆಶಯಗಳಿಗೆ ಬದ್ಧವಾಗಿ ಕಾರ್ಯ ನಿರ್ವಹಿಸಲಿದೆ ಎಂದು ಹೇಳಿದರು.
ಮಾ.1ರಂದು ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ರಾಜ್ಯಾದ್ಯಂತ ಈಗಾಗಲೇ ಜಿಲ್ಲೆ, ತಾಲೂಕು ಬ್ಲಾಕ್ ಮಟ್ಟಗಳಲ್ಲಿ ಚಾಲನೆ ನೀಡಲಾಗಿದೆ. ಪೋಷಕ, ಗೌರವ, ಗೋಲ್ಡನ್ ಹಾಗೂ ಸಾಮಾನ್ಯ ಸದಸ್ಯತ್ವ ಎಂದು 4 ವಿಧಗಳಲ್ಲಿ ಸದಸ್ಯತ್ವ ನೋಂದಣಿ ವಿಂಗಡಿಸಲಾಗಿದೆ. 18 ವರ್ಷ ಮೇಲ್ಪಟ್ಟ ಸಮುದಾಯದ ಮುಖಂಡರು ಸಂಘಟನೆಯಲ್ಲಿ ಸದಸ್ಯತ್ವ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಸ್ಲಿಂ ಜಮಾಅತ್ ರಾಜ್ಯ ಸಮಿತಿ ಅಧ್ಯಕ್ಷ ಮೌಲಾನಾ ಅನ್ವರ್ ಅಲಿ ಸಾಹೇಬ್ ರಾಮನಗರ, ಮುಸ್ಲಿಂ ಜಮಾಅತ್ ರಾಜ್ಯ ಕಾರ್ಯದರ್ಶಿ ಯಾಕೂಬ್ ಯೂಸುಫ್ ಹೊಸನಗರ, ಮುಸ್ಲಿಂ ಜಮಾತ್ ರಾಜ್ಯ ಉಪಾಧ್ಯಕ್ಷ ಮೌಲಾನ ಶಬ್ಬೀರ್ ಅಹ್ಮದ್ ರಜ್ವಿ, ಮುಸ್ಲಿಂ ಜಮಾಅತ್ ಸದಸ್ಯ ಎಂ.ಬಿ. ಅಬ್ದುಲ್ ಹಮೀದ್ ಮಡಿಕೇರಿ, ತುಮಕೂರು ಜಿಲ್ಲಾ ಮುಸ್ಲಿಂ ಜಮಾತ್ ಗೌರವಾಧ್ಯಕ್ಷ ಮುಫ್ತಿ ಇ ತುಮಕೂರು ಮೌಲಾನ ನಫೀಸಾ ಹಬೀಬ್ ಮಿಸ್ಬಾಹಿ, ತುಮಕೂರು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಮುಸ್ತಾಕ್ ಅಹ್ಮದ್ ಸಾಬ್, ತುಮಕೂರು ಜಿಲ್ಲಾ ಕೆಎಂಜೆ ಉಸ್ತುವಾರಿ ಅಬ್ದುಲ್ ರಹ್ಮಾನ್ ಮೊಗರ್ಪಣೆ ಮುಂತಾದವರು ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.









