ದಿಲ್ಲಿ ಹಿಂಸಾಚಾರದ ಸಂದರ್ಭ ನಾಪತ್ತೆಯಾಗಿದ್ದ ಮಗು ಪತ್ತೆ

ಹೊಸದಿಲ್ಲಿ, ಮಾ.5: ಕಳೆದ ವಾರ ಈಶಾನ್ಯ ದಿಲ್ಲಿಯಲ್ಲಿ ನಡೆದ ಹಿಂಸಾಚಾರದ ಸಂದರ್ಭ ಮನೆಯವರಿಂದ ಬೇರ್ಪಟ್ಟು ನಾಪತ್ತೆಯಾಗಿದ್ದ 2 ವರ್ಷದ ಮಗುವನ್ನು ಪತ್ತೆಹಚ್ಚಿ, ಕುಟುಂಬದವರ ವಶಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಗು ನಾಪತ್ತೆಯಾಗಿರುವ ಬಗ್ಗೆ ಮಾಧ್ಯಮದ ವರದಿಯಿಂದ ಮಾಹಿತಿ ಪಡೆದ ದಿಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಹಾಗೂ ಸದಸ್ಯರು ಮಗುವಿನ ಕುಟುಂಬವನ್ನು ಪತ್ತೆಹಚ್ಚಲು ಮುಂದಾದರು. ಆಗ ನಾಪತ್ತೆಯಾಗಿರುವ ಮಗು ಮುಸ್ತಫಾಭಾದ್‌ನಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿರುವ ಶಿಬಿರದಲ್ಲಿ ಸುಹಾನಿ(ಹೆಸರು ಬದಲಿಸಲಾಗಿದೆ) ಎಂಬ ಮಹಿಳೆಯೊಂದಿಗೆ ಇರುವ ಮಾಹಿತಿ ಲಭ್ಯವಾಗಿದೆ. ನಿರಾಶ್ರಿತರ ಶಿಬಿರಕ್ಕೆ ತೆರಳಿ ಸುಹಾನಿಯನ್ನು ಭೇಟಿಯಾದಾಗ ಗಲಭೆ, ಹಿಂಸಾಚಾರ ನಡೆಯುತ್ತಿದ್ದಾಗ ಮಸೀದಿಯೊಂದರ ಬಳಿ ಮಗು ಒಂಟಿಯಾಗಿ ಅಳುತ್ತಾ ನಿಂತಿತ್ತು ಎಂದು ತಿಳಿಸಿದ್ದಾಳೆ.
“ಅಲ್ಲಿದ್ದ ಉದ್ವಿಗ್ನ ಪರಿಸ್ಥಿತಿಯನ್ನು ಗಮನಿಸಿ ಮಗುವನ್ನು ಎತ್ತಿಕೊಂಡು ಹೋಗಿದ್ದೇನೆ. ಪೊಲೀಸರನ್ನು ಕಂಡರೇ ಭಯವಾಗುವ ಕಾರಣ ಪೊಲೀಸರಿಗೆ ಮಾಹಿತಿ ನೀಡಿಲ್ಲ” ಎಂದು ಸುಹಾನಿ ಹೇಳಿದ್ದಾಳೆ. ಬಳಿಕ ಆಕೆಯ ಮನವೊಲಿಸಿ, ಮಗುವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗುವುದು ಎಂಬ ಭರವಸೆ ನೀಡಿದ ಬಳಿಕ ಸುಹಾನಿ ಪೊಲೀಸರ ಸಮ್ಮುಖದಲ್ಲಿ ಮಗುವನ್ನು ಮಹಿಳಾ ಆಯೋಗದ ಸದಸ್ಯರಿಗೆ ಹಸ್ತಾಂತರಿಸಿದ್ದಾಳೆ ಎಂದು ಸ್ವಾತಿ ಮಹಿವಾಲ್ ಹೇಳಿದ್ದಾರೆ.
ಬಳಿಕ ಸ್ಥಳೀಯ ಪೊಲೀಸರ ನೆರವು ಪಡೆದು ಮಗುವಿನ ಪೋಷಕರ ಪತ್ತೆಗೆ ಜಂಟಿ ಕಾರ್ಯಾಚರಣೆ ನಡೆಸಲಾಗಿದೆ. ಗಲಭೆಯ ಸಂದರ್ಭ ಮಗು ನಿಂತಿದ್ದ ಮಸೀದಿಯಿಂದಲೂ ಮಗುವಿನ ಬಗ್ಗೆ ಘೋಷಣೆ ಮಾಡಲಾಗಿದೆ. ಪ್ರದೇಶದ ಪ್ರತೀ ಮನೆಮನೆಗೂ ತೆರಳಿ ಪೋಷಕರ ಬಗ್ಗೆ ವಿಚಾರಿಸಲಾಗಿದೆ. ಕಡೆಗೂ ಪೋಷಕರನ್ನು ಪತ್ತೆಮಾಡಿ ಮಗುವನ್ನು ಹಸ್ತಾಂತರಿಸಲಾಗಿದೆ ಎಂದವರು ವಿವರಿಸಿದ್ದಾರೆ.







