ಉಪ್ಪಿನಂಗಡಿ: ಹಲವು ಕಳ್ಳತನ ಪ್ರಕರಣ; ಮಹತ್ವದ ಸುಳಿವು ಲಭ್ಯ
ಉಪ್ಪಿನಂಗಡಿ, ಮಾ. 5: ಕಳೆದ ಕೆಲವು ಸಮಯಗಳಿಂದ ಉಪ್ಪಿನಂಗಡಿಯ ಪರಿಸರದಲ್ಲಿ ನಡೆದಿರುವ ಕಳ್ಳತನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆಯು ಜಿಲ್ಲೆಯ ವಿವಿಧೆಡೆಗಳಲ್ಲಿ ನಡೆದಿರುವ ಕಳ್ಳತನದ ಪ್ರಕರಣಗಳಲ್ಲಿ ಸಾಮ್ಯತೆಯನ್ನು ಗುರುತಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ಸುಳಿವನ್ನು ಪಡೆದುಕೊಂಡಿದೆ.
ಕಳೆದ ಎರಡು ವರ್ಷಗಳ ಹಿಂದೆ ಕರಾಯದ ನಿವೃತ್ತ ಸೇನಾಧಿಕಾರಿ ಕೆ. ಸುರೇಶ್ ಎಂಬವರ ಮನೆಯಿಂದ ಸುಮಾರು 76 ಪವನ್ ಚಿನ್ನಾಭರಣ ಕಳವು ನಡೆದಿದ್ದು, ಪೊಲೀಸ್ ಇಲಾಖೆ ಈ ಪ್ರಕರಣದಲ್ಲಿ ಯಾವುದೇ ಸಾಧನೆಯನ್ನು ತೋರಿಸಿಲ್ಲ. ಅದರ ಬೆನ್ನಿಗೆ ಜಿ.ಪಂ. ಸದಸ್ಯ ಕೆ.ಕೆ. ಶಾಹುಲ್ ಹಮೀದ್ ರವರ ಮನೆಯೂ ಸೇರಿದಂತೆ ಪರಿಸರದ ಕೆಲ ಮನೆಗಳಲ್ಲಿ ಕಳ್ಳತನ ನಡೆದಿತ್ತು. ಬಳಿಕದ ದಿನಗಳಲ್ಲಿ ಉಪ್ಪಿನಂಗಡಿಯ ಮಠ ಎಂಬಲ್ಲಿನ ಮನೆಯೊಂದರಲ್ಲಿ ಕಳ್ಳತನ ನಡೆದಿದ್ದು, ಈ ಎಲ್ಲಾ ಪ್ರಕರಣಗಳಲ್ಲಿ ಕಳ್ಳರ ಪತ್ತೆ ಕಾರ್ಯ ನಡೆದಿರಲಿಲ್ಲ.
ಈ ಮಧ್ಯೆ ಕಳೆದ ಒಂದು ತಿಂಗಳಾವಧಿಯಲ್ಲಿ ಉಪ್ಪಿನಂಗಡಿಯ ಪರಿಸರದಲ್ಲಿ ಕಳವು ಪ್ರಕರಣಗಳು ಸಂಭವಿಸಿ ನಾಗರಿಕರ ನಿದ್ದೆ ಕೆಡಿಸಿತ್ತು. 34ನೇ ನೆಕ್ಕಿಲಾಡಿಯ ಎನ್ ಗೋಪಾಲ ಹೆಗ್ಡೆ ಎಂಬವರ ಮನೆಯ ಬಾತ್ ರೂಂ ಕಿಟಕಿಯ ಸರಳು ಕಿತ್ತು ಒಳ ನುಗ್ಗಿದ ಕಳ್ಳ ನಗ ನಗದನ್ನು ದೋಚಿದ್ದ ಪ್ರಕರಣದಲ್ಲಿ ಮನೆಯಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾದಲ್ಲಿ ಕಳ್ಳನ ಭಾವಚಿತ್ರ ಸ್ಪಷ್ಟವಾಗಿ ಸೆರೆಯಾಗಿತ್ತು. ಹಾಗೂ ಈ ಮನೆಯಲ್ಲಿ ಲಭಿಸಿದ ಬೆರಳಚ್ಚು ಹಾಗೂ ಇತರ ಕಡೆಗಳಲ್ಲಿ ನಡೆದಿರುವ ಕಳ್ಳತನದ ಪ್ರಕರಣದಲ್ಲಿ ಲಭಿಸಿದ ಬೆರಳಚ್ಚುಗಳ ಸಾಮ್ಯತೆಯ ಆಧಾರದಲ್ಲಿ ಹಲವು ಪ್ರಕರಣಗಳಲ್ಲಿ ಓರ್ವನೇ ಭಾಗಿಯಾಗಿದ್ದಾನೆ ಎನ್ನುವುದನ್ನು ಪೊಲೀಸ್ ಇಲಾಖೆ ಖಚಿತ ಪಡಿಸಿಕೊಂಡಿದೆ ಹಾಗೂ ಈತನಿಂದಲೇ ಜಿಲ್ಲೆಯ ಇತರೆಡೆಗಳಲ್ಲಿಯೂ ಕಳ್ಳತನ ನಡೆದಿರುವ ಸಾಧ್ಯತೆಯೂ ಗೋಚರಿಸಿದ್ದು, ಈ ಬಗ್ಗೆಯೂ ಪೊಲೀಸ್ ಇಲಾಖೆ ಹೆಚ್ಚಿನ ನಿಗಾಇರಿಸಿದೆ.
ಆರೋಪಿ ಹಾಸನ, ಶಿವಮೊಗ್ಗ, ದ.ಕ ಜಿಲ್ಲೆಯಲ್ಲಿಯೂ ವಾಸ್ತವ್ಯವನ್ನು ಹೊಂದಿರುವ ಅಂಶಗಳನ್ನೂ ಪೊಲೀಸರು ಕಲೆ ಹಾಕಿದ್ದು, ಬಂಧನಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಮಾರ್ಗದರ್ಶನದಲ್ಲಿ ಈಗಾಗಲೇ ಮೂರು ತಂಡಗಳನ್ನು ರಚಿಸಿ ಕಾರ್ಯ ತಂತ್ರವನ್ನು ಹೆಣೆಯಲಾಗಿದೆ. ಪುತ್ತೂರು ಡಿವೈಎಸ್ಪಿ ದಿನಕರ ಶೆಟ್ಟಿ, ಗ್ರಾಮಾಂತರ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ, ಹಾಗೂ ಉಪ್ಪಿನಂಗಡಿ ಎಸೈ ಈರಯ್ಯರವರ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಲಾಗಿದ್ದು, ಕಲೆ ಹಾಕಿದ ಮಾಹಿತಿಯನುಸಾರ ಆರೋಪಿಯ ಬಂಧನಕ್ಕೆ ಕಾರ್ಯಾಚರಣೆ ಕೈಗೊಂಡಿದ್ದು, ಶೀಘ್ರವಾಗಿ ಆರೋಪಿಯ ಬಂಧನವಾಗುವ ನಿರೀಕ್ಷೆಯಿದೆ.







