ರಾಜ್ಯ ಬಜೆಟ್ ಮಹಿಳೆ, ಕಾರ್ಮಿಕ ವಿರೋಧಿ: ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮಿ
ಮಹಿಳಾಪರ ಹಕ್ಕೊತ್ತಾಯಕ್ಕಾಗಿ ಪ್ರತಿಭಟನೆ
ಬೆಂಗಳೂರು, ಮಾ.6: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಡಿಸಿರುವ 2020-21ರ ಬಜೆಟ್‌ನಲ್ಲಿ ಮಹಿಳಾ ಆರ್ಥಿಕ ಸ್ವಾವಲಂಬನೆಗೆ ಹಾಗೂ ಸಬಲೀಕರಣಕ್ಕೆ ಯಾವುದೇ ಕಾರ್ಯಕ್ರಮಗಳನ್ನು ನೀಡದೆ ಮಹಿಳಾ ಹಾಗೂ ಕಾರ್ಮಿಕ ವಿರೋಧಿ ಬಜೆಟ್ ಮಂಡಿಸಿದ್ದಾರೆಂದು ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮಿ ಖಂಡಿಸಿದ್ದಾರೆ.
ಶುಕ್ರವಾರ ನಗರದ ಮೈಸೂರ್ ಬ್ಯಾಂಕ್ ವೃತ್ತದಲ್ಲಿ 109ನೆ ಅಂತರ್‌ರಾಷ್ಟ್ರಿಯ ಮಹಿಳಾ ದಿನಾಚರಣೆ ಭಾಗವಾಗಿ ಮಹಿಳಾಪರ ಹಕ್ಕೊತ್ತಾಯಕ್ಕಾಗಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಆಶಾಕಾರ್ಯಕರ್ತೆ, ಅಂಗನವಾಡಿ ಹಾಗೂ ಬಿಸಿಯೂಟ ಕಾರ್ಯಕರ್ತೆಯರ ಬೇಡಿಕೆಗಳ ಬಗ್ಗೆ ಯಾವೊಂದು ಪ್ರಸ್ತಾಪ ಮಾಡಿಲ್ಲ. ಕೇವಲ ಕಣ್ಣೊರೆಸುವ ತಂತ್ರ ಮಾಡಿದ್ದಾರೆಂದು ಆರೋಪಿಸಿದ್ದಾರೆ.
ಗಾರ್ಮೆಂಟ್ಸ್ ನೌಕರರಿಗೆ 1050ರೂ.ಗಳ ಉಚಿತ ಪಾಸ್ ಕೊಡಲಾಗುವುದೆಂದು ಹೇಳಿದ್ದಾರೆ. ಆದರೆ, ಅವರ ಕನಿಷ್ಟ ವೇತನವನ್ನು 9,975ರೂ.ಗೆ ಕಡಿತಗೊಳಿಸಲಾಗಿದೆ. ಆ ಮೂಲಕ ಅಂದಾಜು ನಾಲ್ಕು ಸಾವಿರ ರೂ.ವನ್ನು ಗಾರ್ಮೆಂಟ್ಸ್ ನೌಕರರಿಂದ ಕಿತ್ತುಕೊಳ್ಳಲಾಗಿದೆ ಎಂದು ಅವರು ದೂರಿದರು.
ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯಲ್ಲಿ ಈಗಾಗಲೇ 11 ಸಾವಿರ ಕೋಟಿ ರೂ.ಇದೆ. ಇದು ರಾಜ್ಯ ಸರಕಾರದ ಹಣವಲ್ಲ. ಆ ಹಣವನ್ನೇ ಬಜೆಟ್‌ನಲ್ಲಿ ಬಳಸಿಕೊಂಡು ರಾಜ್ಯ ಸರಕಾರದ ಕೊಡುಗೆ ಎನ್ನುವ ರೀತಿಯಲ್ಲಿ ಪೋಸ್ ನೀಡುತ್ತಿದ್ದಾರೆ. ಅವರಿಗೆ ನಿಜವಾಗಿ ಬದ್ಧತೆ ಇದ್ದರೆ, ಅಂಗನವಾಡಿ, ಬಿಸಿಯೂಟ ಹಾಗೂ ಆಶಾ ಕಾರ್ಯಕರ್ತರಿಗೆ ಸೌಲಭ್ಯಗಳನ್ನು ಹೆಚ್ಚಿಸುವಂತಹ ಕೆಲಸ ಮಾಡಲಿಯೆಂದು ಅವರು ಹೇಳಿದರು.
ಸಿಐಟಿಯುನ ಉಮೇಶ್ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರಕಾರ ಜನವಿರೋಧಿ ನೀತಿಗಳಿಂದಾಗಿ ಕಾರ್ಮಿಕರು ನಿರುದ್ಯೋಗಿಗಳಾಗುತ್ತಿದ್ದಾರೆ. ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ಬಜೆಟ್‌ನಲ್ಲಿ ಕಾರ್ಯಕ್ರಮಗಳೇ ಇಲ್ಲವಾಗಿದೆ. ಆದರೂ ಈ ಬಜೆಟ್‌ನ್ನು ಮಹಿಳಾಪರ ಬಜೆಟ್ ಎಂದು ಬೊಬ್ಬೆ ಹಾಕುತ್ತಿದ್ದಾರೆಂದು ಕಿಡಿಕಾರಿದರು.
ಬಿಜೆಪಿ ಸರಕಾರದಿಂದ ಮಹಿಳೆಯರು, ಕಾರ್ಮಿಕ ಸಮುದಾಯ ಏನೇನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಬಿಜೆಪಿಯ ಜನ ವಿರೋಧಿ ಚಿಂತನೆಗಳ ವಿರುದ್ದ ಜನತೆಯಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ ಎಂದು ಅವರು ಹೇಳಿದರು. ಪ್ರತಿಭಟನೆಯಲ್ಲಿ ಸಿಐಟಿಯುನ ಮುಖಂಡರು, ಕಾರ್ಮಿಕರು ಭಾಗವಹಿಸಿದ್ದರು.
ಹಕ್ಕೊತ್ತಾಯಗಳು
-ಮಹಿಳೆಯರ ಕೆಲಸವನ್ನು ಮಾನ್ಯ ಮಾಡಿ.
-ಸಂಬಳವಿಲ್ಲದ ಕೆಲಸವನ್ನು ಜಿಡಿಪಿ ಲೆಕ್ಕಕ್ಕೆ ಸೇರಿಸಿ, ಸಮಾನ ವೇತನ ನೀಡಿ.
-ಸ್ಕೀಮ್‌ಗಳಲ್ಲಿ ದುಡಿಯುವ ಅಂಗನವಾಡಿ, ಬಿಸಿಯೂಟ, ಆಶಾ, ನರ್ಸ್‌ಗಳು, ಎನ್‌ಎಚ್‌ಎಂಗಳಲ್ಲಿ ದುಡಿಯುವವರನ್ನು ನೌಕರರೆಂದು ಪರಿಗಣಿಸಿ, ಮಾನ್ಯ ಮಾಡಬೇಕು.
-ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಕೂಡಲೇ ಹಿಂಪಡೆಯಬೇಕು.
-ಎಲ್ಲ ಚುನಾಯಿತ ಸಮಿತಿಗಳಲ್ಲಿ ಶೇ.33 ಮಹಿಳೆಯರಿಗೆ ಮೀಸಲಿಡಬೇಕು.







