ಸರಣಿ ಗೆದ್ದ ದ.ಆಫ್ರಿಕಾ
►ಆಸ್ಟ್ರೇಲಿಯ ವಿರುದ್ಧ ಎರಡನೇ ಏಕದಿನ ►ಮಲಾನ್ ಮೊದಲ ಆಕರ್ಷಕ ಶತಕ

ಬ್ಲೋಮ್‌ಫೊಂಟೇನ್, ಮಾ.5: ಆರಂಭಿಕ ಆಟಗಾರ ಜನ್ನೆಮನ್ ಮಾಲನ್ ಮಿಂಚಿನ ವೇಗದಲ್ಲಿ ಸಿಡಿಸಿದ ಅಜೇಯ ಚೊಚ್ಚಲ ಶತಕದ ಸಹಾಯದಿಂದ ದಕ್ಷಿಣ ಆಫ್ರಿಕಾ ತಂಡ ಆಸ್ಟ್ರೇಲಿಯ ವಿರುದ್ಧದ ಎರಡನೇ ಅಂತರ್‌ರಾಷ್ಟ್ರೀಯ ಏಕದಿನ ಪಂದ್ಯವನ್ನು ಬುಧವಾರ 6 ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿತು.
ಈ ಗೆಲುವಿನ ಮೂಲಕ ದಕ್ಷಿಣ ಆಫ್ರಿಕಾ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿತು. ಮೂರನೇ ಹಾಗೂ ಕೊನೆಯ ಪಂದ್ಯ ಪೋಟ್‌ಚೆಫ್‌ಸ್ಟ್ರೂಮ್‌ನಲ್ಲಿ ಶನಿವಾರ ನಡೆಯಲಿದೆ.
ದಕ್ಷಿಣ ಆಫ್ರಿಕಾ ಇದೀಗ ಆಸ್ಟ್ರೇಲಿಯ ವಿರುದ್ಧ ಆಡಿದ್ದ ಕಳೆದ 11 ಏಕದಿನ ಪಂದ್ಯಗಳಲ್ಲಿ 10ರಲ್ಲಿ ಜಯ ಸಾಧಿಸಿ ಶ್ರೇಷ್ಠ ಪ್ರದರ್ಶನ ಮುಂದುವರಿಸಿದೆ. ಟಾಸ್ ಜಯಿಸಿದ ಆಸ್ಟ್ರೇಲಿಯ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಲುಂಗಿ ಗಿಡಿ ಜೀವನಶ್ರೇಷ್ಠ ಬೌಲಿಂಗ್(6-58)ಸಂಘಟಿಸಿ ಆಸ್ಟ್ರೇಲಿಯವನ್ನು 271 ರನ್‌ಗೆ ಆಲೌಟ್ ಮಾಡಿದರು.
ಶನಿವಾರ ಆಡಿದ ತನ್ನ ಚೊಚ್ಚಲ ಪಂದ್ಯದಲ್ಲಿ ಮೊದಲ ಎಸೆತಕ್ಕೆ ವಿಕೆಟ್ ಒಪ್ಪಿಸಿದ ಮಲಾನ್ ಎರಡನೇ ಪಂದ್ಯದಲ್ಲಿ 139 ಎಸೆತಗಳಲ್ಲಿ ಔಟಾಗದೆ 129 ರನ್ ಗಳಿಸಿ ಇನ್ನೂ 9 ಎಸೆತಗಳು ಬಾಕಿ ಇರುವಾಗಲೇ ದಕ್ಷಿಣ ಆಫ್ರಿಕಾ ತಂಡಕ್ಕೆ ಗೆಲುವು ತಂದುಕೊಟ್ಟರು. ಆಸ್ಟ್ರೇಲಿಯ 7ನೇ ಓವರ್‌ನಲ್ಲಿ 50 ರನ್ ಗಳಿಸಿ ಬಿರುಸಿನ ಆರಂಭಕ್ಕೆ ಮುಂದಾಯಿತು. ಡೇವಿಡ್ ವಾರ್ನರ್(35)ಗಿಡಿಗೆ ಮೊದಲ ಬಲಿಯಾದರು. ಆ ನಂತರ ಗಿಡಿ ಅವರು ಸ್ಟೀವನ್ ಸ್ಮಿತ್(13) ಹಾಗೂ ಮಾರ್ನಸ್ ಲ್ಯಾಬುಶೆನ್‌ರನ್ನು ಸತತ ಎಸೆತಗಳಲ್ಲಿ ಪೆವಿಲಿಯನ್‌ಗೆ ಅಟ್ಟಿದರು.
69 ರನ್(87 ಎಸೆತ, 6 ಬೌಂಡರಿ, 2 ಸಿಕ್ಸರ್)ಗಳಿಸಿದ ಆ್ಯರೊನ್ ಫಿಂಚ್ ಅವರು ಅನ್ರಿಚ್ ನೊಟೆ ್ಜರ್ ಬೌಲಿಂಗ್‌ನಲ್ಲಿ ವಿಕೆಟ್‌ಕೀಪರ್ ಕ್ವಿಂಟನ್ ಡಿಕಾಕ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಮಿಚೆಲ್ ಮಾರ್ಷ್(36)ಅವರೊಂದಿಗೆ ಐದನೇ ವಿಕೆಟ್ ಜೊತೆಯಾಟದಲ್ಲಿ 66 ರನ್ ಸೇರಿಸಿದ ಡಿ’ಆರ್ಕಿ ಶಾರ್ಟ್(69 ರನ್, 83 ಎಸೆತ, 5 ಬೌಂಡರಿ)ಆಸೀಸ್‌ಗೆ ಆಸರೆಯಾದರು. ಗಿಡಿ ಆಸ್ಟ್ರೇಲಿಯದ ಕೆಳ ಕ್ರಮಾಂಕದ ಆಟಗಾರರಿಗೆ ಆಘಾತ ನೀಡಿದರು. ಆಸೀಸ್ ಕೊನೆಯ 10 ಓವರ್‌ಗಳಲ್ಲಿ ಕೇವಲ 49 ರನ್ ಗಳಿಸುವಷ್ಟರಲ್ಲಿ ಆರು ವಿಕೆಟ್‌ಗಳನ್ನು ಕಳೆದುಕೊಂಡು ದಿಢೀರ್ ಕುಸಿತ ಕಂಡಿತು.
ಗೆಲ್ಲಲು 272 ರನ್ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ ಇನಿಂಗ್ಸ್‌ನ ಮೂರನೇ ಎಸೆತದಲ್ಲಿ ಪ್ರಮುಖ ಬ್ಯಾಟ್ಸ್ ಮನ್ ಕ್ವಿಂಟನ್ ಡಿಕಾಕ್(0) ವಿಕೆಟ್ ಕಳೆದುಕೊಂಡಿತು. ಈ ತಿಂಗಳಾಂತ್ಯದಲ್ಲಿ ಭಾರತ ಪ್ರವಾಸ ಕೈಗೊಳ್ಳಲಿರುವ ದಕ್ಷಿಣ ಆಫ್ರಿಕಾದ ಏಕದಿನ ತಂಡಕ್ಕೆ ಆಯ್ಕೆಯಾಗದ ಮಲಾನ್ ತಂಡಕ್ಕೆ ಆಸರೆಯಾದರು. ಮಲಾನ್ ಅವರು ಜೆಜೆ ಸ್ಮಟ್ಸ್(41)ಅವರೊಂದಿಗೆ ಎರಡನೇ ವಿಕೆಟ್‌ಗೆ 20.1 ಓವರ್‌ಗಳಲ್ಲಿ ತಾಳ್ಮೆಯ 91 ರನ್ ಜೊತೆಯಾಟ ನಡೆಸಿದರು.
ಫಾರ್ಮ್‌ನಲ್ಲಿರುವ ಹೆನ್ರಿಕ್ ಕ್ಲಾಸನ್ ಎಸೆತಕ್ಕೊಂದು ರನ್(51)ಗಳಿಸಿ ಝಾಂಪಗೆ ವಿಕೆಟ್ ಒಪ್ಪಿಸಿದರು. ಮಲಾನ್ ಜೊತೆಗೆ ಕೈಜೋಡಿಸಿದ ಡೇವಿಡ್ ಮಿಲ್ಲರ್(ಔಟಾಗದೆ 37, 29 ಎಸೆತ)5ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 91 ರನ್ ಸೇರಿಸಿ ಮಾಂಗ್ವಾಂಗ್ ಓವಲ್‌ನಲ್ಲಿ ಆತಿಥೇಯ ತಂಡ 48.3 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 274 ರನ್ ಗಳಿಸಲು ನೆರವಾದರು. ವೇಗದ ಬೌಲರ್ ಲುಂಗಿ ಗಿಡಿ ಹಾಗೂ ಮಲಾನ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಹಂಚಿಕೊಂಡರು.







