ರೊನಾಲ್ಡಿನೊ ಬಂಧನ

ಅಸುನ್‌ಸಿಯೋನ್, ಮಾ.5: ನಕಲಿ ಪಾಸ್‌ಪೋರ್ಟ್‌ನೊಂದಿಗೆ ದೇಶವನ್ನು ಪ್ರವೇಶಿಸಿದ ಕಾರಣಕ್ಕೆ ಬ್ರೆಝಿಲ್‌ನ ಮಾಜಿ ಫುಟ್ಬಾಲ್ ಸೂಪರ್‌ಸ್ಟಾರ್ ರೊನಾಲ್ಡಿನೊರನ್ನು ಪರಾಗ್ವೆ ಪೊಲೀಸರು ಬಂಧಿಸಿದ್ದಾರೆ.
ನಕಲಿ ಪಾಸ್‌ಪೋರ್ಟ್‌ಗಳನ್ನು ಶೋಧಿಸುವ ಉದ್ದೇಶದಿಂದ ಇಲ್ಲಿನ ಹೊಟೇಲ್‌ಗೆ ದಾಳಿ ನಡೆಸಿದ ಪೊಲೀಸರು ರೊನಾಲ್ಡಿನೊ ಹಾಗೂ ಆತನ ಸಹೋದರನನ್ನು ವಿಚಾರಣೆ ನಡೆಸಿದರು. ತನಿಖೆ ಮುಗಿಯುವ ತನಕ ಹೊಟೇಲ್ ಬಿಟ್ಟು ತೆರಳದಂತೆ ರೊನಾಲ್ಡಿನೊಗೆ ನಿರ್ಬಂಧ ವಿಧಿಸಲಾಗಿದೆ.
ಈ ವರ್ಷದ ಜನವರಿ 7ರಂದು ರೊನಾಲ್ಡಿನೊ ಡಿ ಅಸ್ಸಿಸ್ ಮೊರೆರಾ ಹೆಸರಿನಲ್ಲಿ ಪರಾಗ್ವೆ ಪಾಸ್‌ಪೋರ್ಟ್ ಪಡೆದಿದ್ದ ರೊನಾಲ್ಡಿನೊ ತಾನೊಬ್ಬ ನೈಜ ಪರಾಗ್ವೆ ಪ್ರಜೆ ಎಂದು ಬಣ್ಣಿಸಿಕೊಂಡಿದ್ದರು.
ತೆರಿಗೆ ವಂಚಿಸಿದ ಪ್ರಕರಣದಲ್ಲಿ 2019ರ ಜುಲೈನಲ್ಲಿ ರೊನಾಲ್ಡಿನೊ ಅವರ ಬ್ರೆಝಿಲ್ ಹಾಗೂ ಸ್ಪೇನ್ ಪಾಸ್‌ಪೋರ್ಟ್‌ಗಳನ್ನು ಮುಟ್ಟುಗೋಲು ಹಾಕಲಾಗಿತ್ತು. 39ರ ಹರೆಯದ ರೊನಾಲ್ಡಿನೊ ಬಡಮಕ್ಕಳ ಪರ ಅಭಿಯಾನ ನಡೆಸುವ ಭಾಗವಾಗಿ ಪುಸ್ತಕದ ಪ್ರಚಾರ ನಡೆಸಲು ಪರಾಗ್ವೆಯಲ್ಲಿದ್ದಾರೆ. ರೊನಾಲ್ಡಿನೊ 2004 ಹಾಗೂ 2005ರಲ್ಲಿ ಫಿಫಾ ವಿಶ್ವದ ವರ್ಷದ ಆಟಗಾರನಾಗಿ ಆಯ್ಕೆಯಾಗಿದ್ದರು. 2002ರಲ್ಲಿ ಬ್ರೆಝಿಲ್ ವಿಶ್ವಕಪ್ ಗೆದ್ದಾಗ ತಂಡದಲ್ಲಿದ್ದರು. 2006ರಲ್ಲಿ ಬಾರ್ಸಿಲೋನ ಚಾಂಪಿಯನ್ಸ್ ಲೀಗ್ ಜಯಿಸಲು ನೆರವಾಗಿದ್ದರು.







