ಬಿಬಿಎಂಪಿ ಬಹುಕೋಟಿ ನಕಲಿ ಖಾತೆ ವಂಚನೆ ಪ್ರಕರಣ: ಪ್ರಮುಖ ಆರೋಪಿ ಬಂಧನ

ಸಾಂದರ್ಭಿಕ ಚಿತ್ರ
ಬೆಂಗಳೂರು, ಮಾ.6: ಬಿಬಿಎಂಪಿ ಬಹುಕೋಟಿ ನಕಲಿ ಖಾತೆ ವಂಚನೆ ಪ್ರಕರಣ ಸಂಬಂಧ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಬೆಂಗಳೂರು ಮೆಟ್ರೊಪಾಲಿಟನ್ ಕಾರ್ಯಪಡೆ(ಬಿಎಂಟಿಎಫ್) ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ದ್ವಿತೀಯ ದರ್ಜೆ ಗುಮಾಸ್ತ ರಾಘವೇಂದ್ರ ಅನ್ನು ಮಲೆಮಹದೇಶ್ವರ ಬಳಿ ಬಂಧಿಸಿ ಪೊಲೀಸರು ಕರೆ ತಂದಿದ್ದಾರೆ ಎನ್ನಲಾಗಿದೆ.
ಗುತ್ತಿಗೆದಾರರಿಗೆ ಕೊಡಬೇಕಾಗಿದ್ದ ಹಣವನ್ನು ನಕಲಿ ಖಾತೆ ತೆರೆದು ವರ್ಗಾವಣೆ ಮಾಡಿ ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಿಬಿಎಂಪಿ ಅಕೌಂಟ್ ಸೂಪರಿಂಟೆಂಡೆಂಟ್ ಅನಿತಾ ರಾಮಮೂರ್ತಿ ಅವರನ್ನು ಇತ್ತೀಚಿಗೆ ಬಂಧಿಸಲಾಗಿತ್ತು. ತಲೆ ಮರೆಸಿಕೊಂಡಿದ್ದ ರಾಘವೇಂದ್ರ ಕಾಮಗಾರಿಗೆ ಸಂಬಂಧಿಸಿದ್ದ ಪೈಲ್ ಎತ್ತಿಕೊಂಡು ಪರಾರಿಯಾಗಿದ್ದ ಎಂದು ಹೇಳಲಾಗಿತ್ತು. ಆತನನ್ನು ಬಂಧಿಸಿ ವಿಚಾರಣೆ ನಡೆಸಿದ್ದ ಸಂದರ್ಭದಲ್ಲಿ ಫೈಲ್ ನನ್ನ ಬಳಿ ಇಲ್ಲ. ಅದು ಅನಿತಾ ಅವರ ಬಳಿ ಇದೆ ಎಂದು ತಿಳಿಸಿದ್ದಾನೆ ಎಂದು ತಿಳಿದು ಬಂದಿದೆ. ಹೀಗಾಗಿ ಈಗಾಗಲೇ ಜೈಲಿನಲ್ಲಿರುವ ಅನಿತಾರನ್ನು ಬಿಎಂಟಿಎಫ್ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಲು ಮತ್ತೆ ವಶಕ್ಕೆ ಪಡೆಯುವ ಸಾಧ್ಯತೆ ಇದೆ.
ಏನಿದು ಆರೋಪ?: ಬಿಬಿಎಂಪಿಯಲ್ಲಿ ಕೋಟ್ಯಂತರ ರೂ. ಮೊತ್ತದ ಕಾಮಗಾರಿಗಳು ನಡೆಯುತ್ತಿವೆ. ಗುತ್ತಿಗೆದಾರರಿಗೆ ಹಣ ಸಂದಾಯಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದ ಕಡತ(ಪೈಲ್)ಗಳು ಕಚೇರಿಯಿಂದ ಕಚೇರಿಗೆ ರವಾನೆಯಾಗುತ್ತಿರುತ್ತವೆ. ಬಂಧಿತನಾಗಿರುವ ದ್ವಿತೀಯ ದರ್ಜೆ ಗುಮಾಸ್ತ ಈ ಕಡತಗಳನ್ನು ಕೊಂಡೊಯ್ಯುತ್ತಿದ್ದ ಎಂದು ಹೇಳಲಾಗುತ್ತಿದೆ. ಈ ಸಂದರ್ಭದಲ್ಲಿ ಅವನು ಈ ಕಡತಗಳನ್ನು ಕಳವು ಮಾಡಿರಬಹುದು ಎಂಬ ಶಂಕೆ ಮೇಲೆ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.







