ದೇಶದ್ರೋಹ ಕಾನೂನಿಗೆ ಮಾರ್ಗಸೂಚಿ ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

ಹೊಸದಿಲ್ಲಿ, ಮಾ.6: ದೇಶದ್ರೋಹ ಕಾನೂನು ದುರ್ಬಳಕೆಯಾಗದಂತೆ ಕ್ರಮ ಕೈಗೊಳ್ಳಬೇಕು ಹಾಗೂ ಕರ್ನಾಟಕದ ಬೀದರ್‌ನ ಶಾಲೆಯೊಂದರಲ್ಲಿ ನಡೆದ ಸಿಎಎ ವಿರೋಧಿ ನಾಟಕಕ್ಕೆ ಸಂಬಂಧಿಸಿ ಹಲವರ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ಗಳನ್ನು ರದ್ದುಗೊಳಿಸಬೇಕು ಎಂದು ಕೋರಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ದೇಶದ್ರೋಹ ಕಾನೂನಿಗೆ ಸೂಕ್ತ ಮಾರ್ಗಸೂಚಿ ನಿಗದಿಗೊಳಿಸಿ ಅದರ ದುರುಪಯೋಗವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಕೋರಿ ಸಾಮಾಜಿಕ ಕಾರ್ಯಕರ್ತರೊಬ್ಬರು ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಾಧೀಶ ಎಎಂ ಖಾನ್ವಿಲ್ಕರ್ ನೇತೃತ್ವದ ನ್ಯಾಯಪೀಠ, ಸೂಕ್ತ ಪ್ರಾಧಿಕಾರದ ಎದುರು ಅರ್ಜಿ ಸಲ್ಲಿಸುವ ಆಯ್ಕೆ ಅರ್ಜಿದಾರರಿಗೆ ಮುಕ್ತವಾಗಿದೆ ಎಂದು ತಿಳಿಸಿದೆ.
ಎಫ್‌ಐಆರ್ ರದ್ದುಗೊಳಿಸಬೇಕೆಂದು ತಾನು ಒತ್ತಡ ಹೇರುತ್ತಿಲ್ಲ. ಆದರೆ ದೇಶದ್ರೋಹ ಕಾನೂನು ದುರ್ಬಳಕೆಯಾಗದಂತೆ ಸೂಕ್ತ ಮಾರ್ಗಸೂಚಿಯ ಅಗತ್ಯವಿದೆ ಎಂದು ಅರ್ಜಿದಾರರ ಪರ ವಕೀಲ ಉತ್ಸವ್ ಸಿಂಗ್ ಬೈನ್ಸ್ ನ್ಯಾಯಪೀಠಕ್ಕೆ ಮನವಿ ಮಾಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಈ ಪ್ರಕರಣದ ಇನ್ನೊಬ್ಬ ಕಕ್ಷಿದಾರರ ಹೇಳಿಕೆಯನ್ನೂ ಆಲಿಸಬೇಕಿದೆ. ನಿಮ್ಮ ಸೂಚನೆಯಂತೆ ಇದು ನಡೆಯಬೇಕಿಲ್ಲ ಎಂದು ಹೇಳಿ, ಅರ್ಜಿಯ ವಿಚಾರಣೆಗೆ ನಿರಾಕರಿಸಿತು.





