ಪೌರತ್ವ ತಿದ್ದುಪಡಿ ಕಾಯ್ದೆ ಮಹಿಳಾ ವಿರೋಧಿ: ಬಾಲಕೃಷ್ಣ ಶೆಟ್ಟಿ
ಉಡುಪಿಯಲ್ಲಿ ಮಹಿಳಾ ದೌರ್ಜನ್ಯ ಖಂಡಿಸಿ ಸಿಐಟಿಯು ಧರಣಿ

ಉಡುಪಿ, ಮಾ.6: ಮಹಿಳಾ ವಿರೋಧಿಯಾಗಿರುವ ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ಕಾಯ್ದೆಗಳನ್ನು ಕೇಂದ್ರ ಸರಕಾರದ ಕೂಡಲೇ ಕೈಬಿಡ ಬೇಕು ಎಂದು ಸಿಪಿಐಎಂ ಉಡುಪಿ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಒತ್ತಾಯಿಸಿದ್ದಾರೆ.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭ ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಹಾಗೂ ಮಹಿಳೆಯರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಿಐಟಿಯು ಉಡುಪಿ ತಾಲೂಕು ಸಮಿತಿಯ ನೇತೃತ್ವದಲ್ಲಿ ಶುಕ್ರವಾರ ನಗರದ ಪ್ರಧಾನ ಅಂಚೆ ಕಚೇರಿ ಎದುರು ಹಮ್ಮಿಕೊಳ್ಳ ಲಾಗಿದ್ದ ಧರಣಿಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಎನ್‌ಆರ್‌ಸಿಯಿಂದ ಅಸ್ಸಾಂ ರಾಜ್ಯದಲ್ಲಿ ಬಂಧನ ಕೇಂದ್ರದಲ್ಲಿದ್ದ 19ಲಕ್ಷ ಮಂದಿಯಲ್ಲಿ ಶೇ.60ರಷ್ಟು ಮಹಿಳೆಯರೇ ಆಗಿದ್ದರು. ಮದುವೆಯಾಗಿ ಗಂಡನ ಮನೆಗೆ ಬಂದ ಮಹಿಳೆಯರಿಗೆ ತಮ್ಮ ಪೌರತ್ವ ಸಾಬೀತುಪಡಿಸಲು ಸಾಧ್ಯವಾಗುವುದಿಲ್ಲ. ಆದುದರಿಂದ ಮಹಿಳೆಯರನ್ನು ತೊಂದರೆಗೆ ಸಿಲುಕಿಸಲಿರುವ ಎನ್‌ಆರ್‌ಸಿ ಕಾಯ್ದೆಯನ್ನು ಸರಕಾರ ರದ್ದು ಮಾಡೇಕು ಎಂದು ಅವರು ಆಗ್ರಹಿಸಿದರು.
ಮೋದಿ ನೇತೃತ್ವದ ಬಿಜೆಪಿ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳು ಹೆಚ್ಚಳವಾಗಿವೆ. ಅದೇ ರೀತಿ ಕೆಲಸದ ಸ್ಥಳದಲ್ಲಿಯೂ ಮಹಿಳೆಯರು ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಿ ರುವುದು ಕೂಡ ಜಾಸ್ತಿಯಾಗುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೂಡಲೇ ಮಧ್ಯ ಪ್ರವೇಶಿಸಿ ಇದರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದರು.
ಸಿಐಟಿಯು ಮುಖಂಡರಾದ ವಿಶ್ವನಾಥ ರೈ, ಶಶಿಧರ ಗೊಲ್ಲ ಮಾತನಾಡಿ ದರು. ಧರಣಿಯಲ್ಲಿ ಸಿಐಟಿಯು ಉಡುಪಿ ತಾಲೂಕು ಅಧ್ಯಕ್ಷ ರಾಮ ಕರ್ಕಡ, ಪ್ರಧಾನ ಕಾರ್ಯದರ್ಶಿ ಕವಿರಾಜ್ ಎಸ್., ಉಮೇಶ್ ಕುಂದರ್, ಭಾರತಿ, ನಳಿನಿ ಮೊದಲಾದವರು ಉಪಸ್ಥಿತರಿದ್ದರು.







