ಮಹಿಳಾ ವಿರೋಧಿ ನೀತಿ ವಿರುದ್ಧ ಮತ್ತಷ್ಟು ಹೋರಾಟ: ನಾಗರತ್ನ
ಕುಂದಾಪುರದಲ್ಲಿ ಮಹಿಳೆಯರಿಂದ ಧರಣಿ

ಕುಂದಾಪುರ, ಮಾ.6: ಮಹಿಳಾ ದಿನಾಚರಣೆಯಂದೇ ಮಹಿಳೆಯರು ಸರಕಾರಗಳ ಮಹಿಳಾ ವಿರೋಧಿ ನೀತಿ ವಿರುದ್ಧ ಮತ್ತಷ್ಟು ಹೋರಾಟ ಗಳನ್ನು ನಡೆಸಬೇಕಾಗಿರುವುದು ಅನಿವಾರ್ಯವಾಗಿದೆ ಎಂದು ಮಹಿಳಾ ನಾಯಕಿ ನಾಗರತ್ನ ನಾಡ ಹೇಳಿದ್ದಾರೆ.
ಮಹಿಳಾ ದಿನಾಚರಣೆಯ ಅಂಗವಾಗಿ ಸಿಐಟಿಯು ಕುಂದಾಪುರ ತಾಲೂಕು ಸಮಿತಿ ವತಿಯಿಂದ ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಮತ್ತು ಮಹಿಳೆಯರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕುಂದಾಪುರದ ಅಂಚೆ ಕಛೇರಿ ಎದುರು ಇಂದು ನಡೆದ ಧರಣಿಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಮಹಿಳೆಯರ ಪರ ಎಂದು ಹೇಳುತ್ತಿರುವ ಕೇಂದ್ರ ಬಿಜೆಪಿ ಸರಕಾರದ ಸಂಸತ್ತಿನಲ್ಲಿ ಕೇವಲ ಶೇ.14ರಷ್ಟು ಮಹಿಳೆಯರು ಮಾತ್ರ ಇದ್ದಾರೆ. ಬಿಜೆಪಿ ಸರಕಾರ ಬಹುಮತದ ನೆಪವೊಡ್ಡಿ ಸಂವಿಧಾನ ವಿರೋಧಿ ಕೃತ್ಯಗಳನ್ನು ನಡೆಸು ತ್ತಿದೆ. ಮಹಿಳಾ ಮೀಸಲಾತಿ ಬಗ್ಗೆ ಬಿಜೆಪಿ ತನ್ನ ನಿಲುವು ಸ್ಪಷ್ಟ ಪಡಿಸಿಲ್ಲ. ಪೌರತ್ವ ತಿದ್ದುಪಡಿ ಕಾಯ್ದೆ ಕೊಡ ಮಹಿಳೆಯರನ್ನು ಗುರಿಯಾಗಿಸಿದೆ. ಕೇಂದ್ರದ ಈ ಮಹಿಳಾ ವಿರೋಧಿ ನೀತಿಯನ್ನು ಸೋಲಿಸ ಬೇಕಾಗಿದೆ ಎಂದರು.
ಸಿಐಟಿಯು ಜಿಲ್ಲಾಧ್ಯಕ್ಷ ಕೆ.ಶಂಕರ್ ಮಾತನಾಡಿ, ಕೇಂದ್ರ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಮಹಿಳೆಯರು ತೀವ್ರವಾದ ನಿರುದ್ಯೋಗ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಒಟ್ಟು ದುಡಿಮೆಯಲ್ಲಿ ಮಹಿಳೆಯರ ಪಾಲು ಶೇ.41.6 ರಷ್ಟಿದ್ದು, 2017-2018ರಲ್ಲಿ ಶೇ.20ರಷ್ಟು ಕಡಿಮೆ ಯಾಗಿ, ಈಗ ಶೇ.22ಕ್ಕೆ ಇಳಿದಿರುವುದು ಆತಂಕಕಾರಿಯಾಗಿದೆ ಎಂದು ತಿಳಿಸಿದರು.
ಸಿಐಟಿಯು ತಾಲೂಕು ಸಂಚಾಲಕ ಎಚ್.ನರಸಿಂಹ, ಮುಖಂಡರಾದ ಮಹಾಬಲವಡೇರ ಹೋಬಳಿ, ಸುರೇಶ್ ಕಲ್ಲಾಗರ, ವೆಂಕಟೇಶ್ ಕೋಣಿ, ಬಲ್ಕೀಸ್, ಪದ್ಮಾವತಿ ಶೆಟ್ಟಿ, ಸುಶೀಲ ನಾಡ, ಆರತಿ, ಶೀಲಾವತಿ ಪಡುಕೋಣೆ ಮೊದಲಾದವರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಹೊಸ ಬಸ್ ನಿಲ್ದಾಣ ದಿಂದ ಅಂಚೆ ಕಛೇರಿವರೆಗೆ ಮೆರವಣಿಗೆ ನಡೆಸಿ, ಅಂಚೆ ಪ್ರಧಾನ ಪಾಲಕರ ಮುಖಾಂತರ ಪ್ರಧಾನಮಂತ್ರಿಗೆ ಬೇಡಿಕೆಗಳ ಮನವಿಯನ್ನು ಸಲ್ಲಿಸಲಾಯಿತು.








